ಮಳೆರಾಯನ ಮುನಿಸಿಗೆ ಬಾಡುತ್ತಿದೆ ಬೆಳೆ

male
Published on

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಮುಂಗಾರು ಮಳೆ ಅವಧಿ ಮುಗಿದು, ಈಗ ಉತ್ತರ ಮಳೆ ಪ್ರಾರಂಭವಾಗಿ ನಾಲ್ಕೈದು ದಿನಗಳು ಕಳೆದರೂ ಮಳೆಯಾಗಿಲ್ಲ. ವರುಣ ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ಪರಿಣಾಮ ಬೆಳೆಗಳು ಒಣಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವದಿಂದಲೂ ನಿರೀಕ್ಷೆಗೂ ಮೀರಿ ಮಳೆಯಾಗಿತ್ತು. ಇದರಿಂದಾಗಿ ಇದುವರೆಗೂ ಬಿತ್ತನೆ ಕಾರ್ಯವು ಶೇ.90.76 ಸಾಧನೆಯಾಗಿದ್ದು, ತೇವಾಂಶದ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.


ಪ್ರಮುಖವಾಗಿ ಶೇಂಗಾ, ರಾಗಿ, ಅವರೆ, ಅಲಸಂದೆ, ಜೋಳ, ತೊಗರಿ ಸೇರಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಬಿತ್ತನೆ ವೇಳೆ ಸಂತಸದಲ್ಲಿದ್ದ ರೈತರು ಈಗ ಮಳೆಗಾಗಿ ಕಾದು ಕುಳಿತಿದ್ದಾರೆ. ಆಗಸ್ಟ್‌ನಲ್ಲಿ ವಾಡಿಕೆಯಂತೆ 94.0 ಮಿ.ಮೀ. ಮಳೆಯಾಗಬೇಕಿತ್ತು, ಆದರೆ ತಿಂಗಳ ಆರಂಭದಲ್ಲಿ ಮಳೆ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯಕ್ಕೆ ಆಸಕ್ತಿ ತೋರಿಸಿರಲಿಲ್ಲ. ತಿಂಗಳ ಕೊನೆಯ ವಾರದ ವೇಳೆಗೆ ಮಳೆಯ ಪ್ರವಾಣವು 161.6 ಮಿ.ಮೀ ಸುರಿದಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿಸಿ ಬಿತ್ತನೆ ಕಾರ್ಯವು ಹೆಚ್ಚಳವಾಯಿತು. ಅನುಕೂಲಕ್ಕೆ ತಕ್ಕಂತೆ ಸೆಪ್ಟೆಂಬರ್ ಮೊದಲ ವಾರದ ತನಕ ಮಳೆ ಉತ್ತಮವಾಗಿದ್ದರಿಂದ ಬಿತ್ತನೆಯ ಪ್ರವಾಣವೂ ಹೆಚ್ಚಾಗಿದೆ. ಪ್ರತಿವರ್ಷವೂ ಶೇ.100 ಬಿತ್ತನೆಯಲ್ಲಿ ಸರಿಸುವಾರು ಶೇ.90 ವಾತ್ರವೇ ಆಗುತ್ತಿತ್ತು. ಅಂತೆಯೇ ಈ ಬಾರಿಯೂ 90.76 ಆಗಿದೆ. ಆದರೆ, ಈಗ ಹಲವು ದಿನಗಳಿಂದ ಮಳೆ ಕೈಕೊಟ್ಟಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮಳೆಯಾಶ್ರಿತ ರೈತರೇ ಹೆಚ್ಚು: ಮುಂಗಾರು ಹಂಗಾಮಿನ ಆರಂಭದಲ್ಲೇ ಬಿತ್ತನೆ ವಾಡಿರುವ ಬೆಳೆಗಳು ಉತ್ತಮವಾಗಿ ಬೆಳೆದಿದ್ದವು. ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ ರೈತರೇ ಇದ್ದು, ಈಗ ಅವರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1,02,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆ ಪೈಕಿ ರಾಗಿ 60,973 ಹೆಕ್ಟೇರ್ ಬಿತ್ತನೆಯಾಗಿದೆ. ನೆಲಗಡಲೆ ಬಿತ್ತನೆ ಗುರಿ 11,757 ಹೆಕ್ಟೇರ್ ಹಾಗೂ ತೊಗರಿ ಬಿತ್ತನೆ ಗುರಿ 4,500 ಹೆಕ್ಟೇರ್ ಇದ್ದು, ಪ್ರಸ್ತುತ ಜಿಲ್ಲೆಯಾದ್ಯಂತ ನೀರಾವರಿ ಹಾಗೂ ಮಳೆಯಾಶ್ರಿತ ರಾಗಿ, ನೆಲಗಡಲೆ, ತೊಗರಿ ಬೆಳೆಗಳನ್ನು 86,630 ಹೆಕ್ಟೇರ್‌ನಲ್ಲಿ ಬಿತ್ತನೆ ವಾಡಲಾಗಿದೆ.

ಬಾರದಿದ್ದರೆ ಸಂಕಷ್ಟ: ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದ್ದು, ರಾಗಿ, ಅವರೆ, ಶೇಂಗಾ ಬೆಳೆಗಳು ಬಾಡುತ್ತಿವೆ. ಮಳೆಯಾದರೆ ಬೆಳೆಗಳು ಸುಧಾರಣೆಯಾಗಬಹುದು. ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ಒಳಗಾಗುವ ಆತಂಕ ಕಾಡುತ್ತಿದೆ. ರಾಗಿ ಬಿತ್ತನೆಗೆ ಕೆಲವೇ ದಿನಗಳ ಕಾಲಾವಕಾಶವಿದೆ. ಮುಂದಿನ ಮಳೆಗೆ ಹುರುಳಿ ಬಿತ್ತನೆಗೆ ಅವಕಾಶವಿದ್ದು, ಈಗ ಯಾವುದಕ್ಕೂ ಮಳೆಯ ಅವಶ್ಯವಿದೆ. ಕೂಡಲೇ ಮಳೆ ಬಂದಿದ್ದೇ ಆದಲ್ಲಿ ಬೆಳೆಗಳು ಸಮೃದ್ಧವಾಗಿ ಬೆಳೆಯಲಿವೆ. ಇಲ್ಲವೇ ನಷ್ಟದ ಪ್ರಮಾಣ ಹೆಚ್ಚಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net