ಮಳೆ ಕೊರತೆ ಬತ್ತಿದೆ ನೀರಿನ ಒರತೆ

Lack of rain has dried up water hardness
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಕೊಡಗಿನಲ್ಲಿ ಈ ಬಾರಿ ಉಂಟಾದ ಮಳೆಯ ಪರಿಣಾಮ ಬೇಸಿಗೆಯ ಆರಂಭಕ್ಕೂ ಮೊದಲೇ ಕಾಣಿಸಿಕೊಳ್ಳತೊಡಗಿದೆ. ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಪಕ್ಕದಲ್ಲೇ ಇರುವ ಭಾಗಮಂಡಲದಲ್ಲಿ ನದಿಯ ಹರಿವು ತೀವ್ರವಾಗಿ ಇಳಿದಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಾದ ವಿರಾಜಪೇಟೆ, ಕುಶಾಲನಗರ ಮತ್ತು ನದಿಯಂಚಿನ ಬಹುತೇಕ ಗ್ರಾಮಗಳು ಕುಡಿಯಲು ಕಾವೇರಿ ನೀರನ್ನೇ ಅವಲಂಭಿಸಿದ್ದು, ಈಗಿನ ಪರಿಸ್ಥಿತಿ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.
ಸಾಮಾನ್ಯವಾಗಿ ವರ್ಷದಲ್ಲಿ ೬ ತಿಂಗಳು ಮಳೆಯಿಂದ ಕೂಡಿರುವ ಕೊಡಗಿನಲ್ಲಿ ಈ ವರ್ಷ ಬೇರೆಯದ್ದೇ ಸ್ಥಿತಿ ಕಂಡುಬರುತ್ತಿದೆ. ಈ ಮುಂಗಾರಿನಲ್ಲಿ ಶೇ. ೩೮ರಷ್ಟು ಮಳೆಯ ಕೊರತೆ ಜಿಲ್ಲೆಯನ್ನು ಕಾಡಿದೆ. ವಾಡಿಕೆಯ ೨,೭೨೭.೬ ಮಿಮೀ ಮಳೆಯಾಗಬೇಕಿದ್ದಲ್ಲಿ ೧,೬೮೯.೯ ಮಿಮೀ ಮಳೆ ಬಂದಿದೆ. ಜನವರಿ ಮತ್ತು ಸೆಪ್ಟೆಂಬರ್ ಹೊರತುಪಡಿಸಿದರೆ ಉಳಿದ ಎಲ್ಲಾ ತಿಂಗಳುಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಬಂದಿದೆ. ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿಯುವ ಮಳೆಗೆ ಹೆಚ್ಚಿನ ಮಹತ್ವವಿದೆ. ಈ ಮೂರು ತಿಂಗಳಿನಲ್ಲಿ ಬರುವ ಮಳೆಯಿಂದ ಕೃಷಿ ಚುಟುವಟಿಕೆಗಳಿಗೆ ಅನುಕೂಲ ಆಗುವುದಲ್ಲದೆ ಭೂಮಿಯ ಅಂತರ್ಜಲ ಮಟ್ಟ ಏರಲೂ ಸಹಾಯ ಆಗುತ್ತದೆ.

ಜೂನ್‌ನಲ್ಲಿ ವಾಡಿಕೆಯ ೫೩೪ ಮಿಮೀ ಮಳೆಯಾಗಬೇಕಿದ್ದಲ್ಲಿ ೧೦೫ ಮಿಮೀ ಮಾತ್ರ ಮಳೆಯಾಗಿದ್ದು, ಶೇ.೮೦.೩ರಷ್ಟು ಕೊರತೆ ಆಗಿದೆ. ಜುಲೈನಲ್ಲಿ ವಾಡಿಕೆಯ ೮೫೯.೫ ಮಿಮೀ ಮಳೆ ಬರಬೇಕಿದ್ದಲ್ಲಿ ೮೨೧.೦೬ ಮಿಮೀ ಮಾತ್ರ ಮಳೆ ಬಂದಿದ್ದು, ಶೇ. ೫.೭ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಅಬ್ಬರದ ಮಳೆ ಇರುತ್ತಿತ್ತು. ಜಿಲ್ಲೆಯಲ್ಲಿ ಪ್ರವಾಹ, ಬರೆ ಕುಸಿತದಂತಹ ಅನಾಹುತಗಳಿಗೆ ಕಾರಣವಾಗುವಂತೆ ವರುಣ ಧಾರಾಕಾರವಾಗಿ ಸುರಿಯುತ್ತಿದ್ದ. ಆದರೆ ಈ ಮಳೆಗಾಲದಲ್ಲಿ ಮಾತ್ರ ಅಂತಹ ಯಾವುದೇ ಅಬ್ಬರ ಕಂಡು ಬಂದಿರಲಿಲ್ಲ. ವಾಡಿಕೆಯ ೫೭೨.೨ ಮಿಮೀ ಮಳೆಯಾಗಬೇಕಿದ್ದಲ್ಲಿ ಕೇವಲ ೯೮.೧ ಮಿಮೀ ಮಳೆ ಸುರಿದಿದ್ದು, ಶೇ. ೮೨.೯ರಷ್ಟು ಕಡಿಮೆ ಮಳೆ ದಾಖಲಾಗಿತ್ತು.

ಕಡಿಮೆಯಾದ ಮಳೆಯ ಪ್ರಮಾಣದಿಂದಾಗಿ ಪರಿಣಾಮಗಳು ಈಗ ಬೇಸಿಗೆಗೆ ಮೊದಲೇ ಕಾಣಿಸಿಕೊಳ್ಳಲಾರಂಭಿಸಿದೆ. ನಿರೀಕ್ಷಿತ ಮಟ್ಟದಲ್ಲಿ ಅಂತರ್ಜಲ ಮರುಪೂರಣ ಆಗದ ಕಾರಣ ಜಿಲ್ಲೆಯಲ್ಲಿ ಈಗಾಗಲೇ ಅಂತರ್ಜಲದ ಮಟ್ಟ ಕುಸಿದಿದೆ. ಕೊಡಗಿನಲ್ಲಿ ಅಂತರ್ಜಲ ಮಟ್ಟ ದಶಕದಲ್ಲಿಯೇ ಕನಿಷ್ಠ ಎನ್ನಬಹುದಾದ ಮಟ್ಟಕ್ಕೆ ತಲುಪಿದೆ. ೧೩-೧೪ ಮೀ. ಆಸುಪಾಸಿನಲ್ಲಿ ಇರುತ್ತಿದ್ದ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟ ಈ ವರ್ಷ ೧೫.೭೯ ಮೀ.ಗೆ ತಲುಪಿದ್ದು, ೧೦ ವರ್ಷದಲ್ಲಿ ೨.೩೫ ಮೀ. ಕುಸಿತ ಕಂಡುಬಂದಿದೆ. ಕಳೆದ ಸಾಲಿನಲ್ಲಿ ಶೇ.೩೮ ರಷ್ಟು ಮಳೆ ಕೊರತೆಯಾಗಿರುವುದರಿಂದ ಅಂತರ್ಜಲ ಮಟ್ಟ ಇಳಿದಿದೆ.
ಕಳೆದ ಒಂದು ದಶಕದಲ್ಲಿ ಕೊಡಗು ೩ ಬಾರಿ ಬರ ಪರಿಸ್ಥಿತಿ ಎದುರಿಸಿದೆ. ೨೦೧೫ ಮತ್ತು ೨೦೧೭ರಲ್ಲಿಯೂ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿತ್ತು. ಈ ಸಂದರ್ಭ ಜಿಲ್ಲೆಯ ಅಂತರ್ಜಲ ಮಟ್ಟ ೨೦೧೫ರಲ್ಲಿ ೧೪.೩೫ ಮತ್ತು ೨೦೧೭ರಲ್ಲಿ ೧೪.೨೭ ಮೀ.ಗಳನ್ನು ತಲುಪಿತ್ತು. ೨೦೧೫ ರ ೧೪.೩೫ ಮೀ. ಅತಿ ಕಡಿಮೆ ಎನಿಸಿಕೊಂಡಿತ್ತು. ಆದರೆ, ಈ ವರ್ಷ ಈ ಪ್ರಮಾಣ ಇನ್ನಷ್ಟು ತಗ್ಗಿದ್ದು, ಅಂತರ್ಜಲದ ಸ್ಥಿರ ಮಟ್ಟ ೧೫.೭೯ ಕ್ಕೆ ತಲುಪಿದೆ. ಈ ಮುಂಗಾರಿನ ಅವಧಿಯಲ್ಲಿ ಮಳೆಯ ದಿನಗಳು ತೀರಾ ಕಡಿಮೆಯಿದ್ದ ಹಿನ್ನೆಲೆ ೨೦೨೨ಕ್ಕೆ ಹೋಲಿಸಿದರೆ ೨೦೨೩ರ ವಷಾರ್ಂತ್ಯಕ್ಕೆ ಅಂತರ್ಜಲದ ಮಟ್ಟ ೧.೯೩ ಮೀ.ಗಳಷ್ಟು ಇಳಿಕೆ ಕಂಡಿದೆ.

ಮಳೆಗಾಲದಲ್ಲಿ ಜಲದ ಒರತೆಗಳು ಹುಟ್ಟಿಕೊಳ್ಳದೆ ಜಲಮೂಲಗಳು ಬತ್ತಿ ಹೋಗಲಾರಂಭಿಸಿವೆ. ಕಾವೇರಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ನದಿ ಚಿಕ್ಕ ತೊರೆಯ ರೂಪ ತಾಳಿದೆ. ನದಿ ದಡದಲ್ಲಿ ಕಾಮಗಾರಿ ನಡೆಯುತ್ತಿರುವುದರ ಪರಿಣಾಮವೂ ಇಲ್ಲಿ ಉಂಟಾಗಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಪುಣ್ಯ ಸ್ನಾನ ಮಾಡಲು ಕೂಡ ನೀರಿಲ್ಲದಂತಾಗಿದೆ. ದೇವಾಲಯಕ್ಕೆ ಕೈ, ಕಾಲು ತೊಳೆದು ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಒಂದು ವೇಳೆ ಸದ್ಯದಲ್ಲಿ ಮಳೆ ಬಾರದಿದ್ದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗುವ ಸಾಧ್ಯತೆ ಇದೆ.

ನದಿ ಉಗಮ ಸ್ಥಾನದ ಬಳಿಯೇ ಇಂಥ ಸ್ಥಿತಿ ಇರುವಾಗ ಜಿಲ್ಲೆಯ ವಿವಿಧೆಡೆ ಕಾವೇರಿ ನದಿಯ ಚಿತ್ರಣ ಇದಕ್ಕಿಂತ ಭಿನ್ನವಾಗಿ ಇಲ್ಲ. ಕಾಫಿ ತೋಟಕ್ಕೆ ನೀರು ಹಾಯಿಸಲು ನದಿಗೆ ದೊಡ್ಡ ದೊಡ್ಡ ಪಂಪ್‌ಗಳನ್ನು ಜೋಡಿಸಿ ನೀರು ತೆಗೆಯುತ್ತಿರುವುದು ಕೂಡ ನದಿಯ ನೀರಿನ ಮಟ್ಟದ ಮೇಲೆ ಪರಿಣಾಮ ಬೀರಿದೆ. ಕುಶಾಲನಗರ, ವಿರಾಜಪೇಟೆ ಸೇರಿ ಪ್ರಮುಖ ಪಟ್ಟಣಗಳು, ಗ್ರಾ.ಪಂ. ವ್ಯಾಪ್ತಿಗೆ ಕಾವೇರಿ ನದಿಯಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರು ಎಷ್ಟು ದಿನಕ್ಕೆ ಸಾಕಾಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕುಶಾಲನಗರ ತಾಲೂಕಿನ ಜಮೀನುಗಳಿಗೆ ನೀರೊದಗಿಸುವ ಚಿಕ್ಲಿಹೊಳೆ ಜಲಾಶಯ ಡಿಸೆಂಬರ್‌ಲ್ಲಿಯೇ ಖಾಲಿ ಆಗಿದೆ. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಗೆ ನೀರು ಕೊಡುವ ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಹಾರಂಗಿಯೂ ಇದೇ ದಾರಿಯಲ್ಲಿದೆ. ೨,೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಮಂಗಳವಾರದ ಮಾಹಿತಿ ಪ್ರಕಾರ ೨೮೩೦.೮೭ ಅಡಿಗಳಷ್ಟು ನೀರಿದೆ. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ೨.೬೩೨ ಅಡಿಗಳಷ್ಟು ಬಳಕೆಯೋಗ್ಯ ನೀರಿನ ಸಂಗ್ರಹ ಇದೆ. ೧೯೫ ಕ್ಯೂಸೆಕ್ ನೀರಿನ ಒಳಹರಿವು ಇದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಲೇ ಇದ್ದು ಸಹಿಸಲಸಾಧ್ಯ ಧಗೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಜಿಲ್ಲೆಯ ಹಲವೆಡೆ ಮಂಗಳವಾರ ಗರಿಷ್ಠ ತಾಪಮಾನ ೩೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ ೧೮ ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಈ ಪ್ರಮಾಣದಲ್ಲಿ ಬಿಸಿಲು ಇರುವುದರಿಂದ ಇನ್ನು ಒಂದೆರಡು ದಿನಗಳಲ್ಲಿ ಮಳೆ ಆಗಬಹುದು ಎನ್ನುವ ನಿರೀಕ್ಷೆಯೂ ಇದೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾಗಮಂಡಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಹಾಗಾಗಿಯೇ ಮುನ್ನೆಚ್ಚರಿಕೆ ಕ್ರಮವಾಗಿ ಜಾಕ್‌ವೆಲ್ ತೆಗೆದು ಮೋಟಾರ್ ಅಳವಡಿಸಿ ಈ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ ಮಾಡಿದೆ. ನಾವು ಅಳವಡಿಸಿದ್ದ ಪಂಪ್, ಪೈಪ್‌ಗಳನ್ನು ಕಿತ್ತೊಯ್ಯಲಾಗಿದೆ. ಈಚೆಗೆ ಶಾಸಕ ಪೊನ್ನಣ್ಣ ಅವರ ಗಮನಕ್ಕೂ ಈ ವಿಷಯ ತಂದಿದ್ದು, ಕುಡಿಯುವ ನೀರಿಗೆ ಅಡ್ಡಿ ಮಾಡದಂತೆ ಅರಣ್ಯ ಇಲಾಖೆಗೆ ಅವರು ಸೂಚನೆ ನೀಡಿದ್ದರೂ ಇಲ್ಲಿಯ ತನಕ ಯಾವುದೇ ಪ್ರಯೋಜನ ಆಗಿಲ್ಲ.
ಕಾಳನ ರವಿ, ಅಧ್ಯಕ್ಷ, ಭಾಗಮಂಡಲ ಗ್ರಾ.ಪಂ

ಕುಶಾಲನಗರ ಮತ್ತು ಮಡಿಕೇರಿಗೆ ನೀರು ಪೂರೈಕೆಯ ಮೂಲಗಳಲ್ಲಿ ನಿಗದಿತ ಮಟ್ಟದಲ್ಲಿ ನೀರು ಉಳಿಸಿಕೊಳ್ಳಲು ಸೂಚಿಸಲಾಗಿದೆ. ಸದ್ಯದ ಮಟ್ಟಿಗೆ ಕೊಡಗಿನಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಟ್ಯಾಂಕರ್‌ಗಳ ವ್ಯವಸ್ಥೆಗಾಗಿ ಟೆಂಡರ್ ಕರೆದು ವರ್ಕ್ ಆರ್ಡರ್ ಕೊಡಲಾಗಿದೆ. ನೀರೆತ್ತುವ ಮೋಟಾರ್‌ಗಳು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆಯೂ ಸೂಚಿಸಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net