

ಬೇತಮಂಗಲ: ಬಂಗಾರು ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಕೆಜಿಎಫ್ ತಾಲೂಕು ಬೇತಮಂಗಲ ಸಮೀಪದ ಗುಟ್ಟಹಳ್ಳಿಯಲ್ಲಿ ನೆಲೆಸಿರುವ ಪ್ರಸನ್ನ ವೆಂಕಟರಮಣಸ್ವಾಮಿ ಸನ್ನಿಧಿಗೆ ಶ್ರಾವಣದ ಎರಡನೇ ಶನಿವಾರ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದರು. ಪ್ರತಿವರ್ಷ ಶ್ರಾವಣ ಬಂತೆಂದರೆ ನಿಲ್ಲಲು ಜಾಗವಿಲ್ಲದಷ್ಟು ಗಿಜುಗುಡುತ್ತಿದ್ದ ದೇವಾಲಯದಲ್ಲಿ ಈ ಬಾರಿ ಪ್ರಚಾರದ ಕೊರತೆಯಿಂದಾಗಿ ಭಕ್ತಗಣ ಅಷ್ಟಾಗಿ ಸುಳಿಯಲಿಲ್ಲ.
ಕಳೆದ ಆರು ತಿಂಗಳ ಹಿಂದೆ ದೇವಾಲಯದ ಆವರಣದಲ್ಲಿರುವ ಮಹಾದ್ವಾರ ಗೋಪುರ ಸೇರಿ ಎಲ್ಲ ಗೋಪುರಗಳು ಹಾಗೂ ಎಲ್ಲೆಡೆ ಸುಣ್ಣ ಬಣ್ಣ ಬಳಿಯುವ ಕೆಲಸ ಪ್ರಾರಂಭವಾಗಿತ್ತು. ಆ ವೇಳೆ ಬೆಟ್ಟದ ಮೇಲಿನ ಗರ್ಭಗುಡಿ ಮುಚ್ಚಲಾಗಿತ್ತು. ಬೆಟ್ಟದ ಮೇಲೆ ದರ್ಶನಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಅವರು ವಿಶೇಷ ಅನುದಾನದಲ್ಲಿ ನೀಡಲಾಗಿದ್ದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಪುನರ್ ನವೀಕರಣ ಮತ್ತು ಜೀಣೋರ್ದ್ಧಾರ ನಡೆದು, ಮಹಾ ಕುಂಭಾಬಿಷೇಕ ನಂತರ ಬೆಟ್ಟದ ಮೇಲೆ ದೇವರನ್ನ ಪುನರ್ ಪ್ರತಿಷ್ಠಾಪನಾ ಕಾರ್ಯವು ನಡೆಯಿತು. ಜು.29,30, ಮತ್ತು 31 ರಂದು ನಡೆದ ದೈವ ಕಾರ್ಯಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಭಕ್ತರಿಗೆ ಮತ್ತು ಸರಿಯಾದ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.
ದೇವಾಲಯ ಪುನರ್ ಪ್ರಾರಂಭ
ಶ್ರಾವಣದ 2ನೇ ಶನಿವಾರ ಸುಮಾರು 10 ಸಾವಿರ ಭಕ್ತರು ಆಗಮಿಸುತ್ತಿದ್ದರು, ಆದರೆ, ಬೆಟ್ಟದ ಮೇಲಿನ ದೇವರ ದರ್ಶನಕ್ಕೆ ಮುಕ್ತವಾಗಿರುವ ಬಗ್ಗೆ ಭಕ್ತರಿಗೆ ಸರಿಯಾದ ಮಾಹಿತಿ ಮತ್ತು ಪ್ರಚಾರ ನೀಡದ ಕಾರಣ ಭಕ್ತರು ಹೆಚ್ಚಾಗಿ ಇತ್ತ ಸುಳಿಯಲಿಲ್ಲ ಎನ್ನಲಾಗಿದೆ. ಬಡವರ ತಿರುಪತಿ ಎಂದೂ ಸಹ ಕರೆಯಲ್ಪಡುವ ಪುರಾಣ ಪ್ರಸಿದ್ಧ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದು ಕರ್ನಾಟಕ ಅಷ್ಟೇ ಅಲ್ಲದೆ ಆಂಧ್ರ ಮತ್ತು ತಮಿಳುನಾಡಿನಿಂದ ಸಹ ಪ್ರತಿ ವರ್ಷ ಶ್ರಾವಣ ಶನಿವಾರಗಳಲ್ಲಿ ಹೆಚ್ಚಾಗಿ ಭೇಟಿ ನೀಡಿ ದರ್ಶನ ಪಡೆಯುದ್ದರು. ಉಳಿದಂತೆ ಶುಕ್ರವಾರ ರಾತ್ರಿ ಸಂಪ್ರದಾಯದಂತೆ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯಿತು. ಶನಿವಾರ ಬೆಳಗ್ಗೆ ದೇವರಿಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆ ನಂತರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಶಾಸಕಿ ರೂಪಕಲಾ ಭೇಟಿ
ಎರಡನೇ ಶನಿವಾರ ಪ್ರಯುಕ್ತ ಬೆಳಗ್ಗೆಯೇ ಶಾಸಕಿ ರೂಪಕಲಾ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು. ನಂತರ ತಾವೇ ಮಾಡಿಸಿದ್ದ ಪ್ರಸಾದವನ್ನು ಭಕ್ತರಿಗೆ ವಿತರಿಸುವ ಮೂಲಕ ಪ್ರಸಾದ ವಿನಿಯೋಗ ಮಾಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀನಿವಾಸರೆಡ್ಡಿ, ಪೇಷ್ಕಾರ್ ಇದ್ದರು.