ಬೆಳೆಗಳಿಗೆ ತೇವಾಂಶ ಕೊರತೆ

Lack of moisture for crops
Published on

ಬ್ಯಾಡಗಿ: ತಾಲೂಕಿನಲ್ಲಿ ಶೇ. 86ರಷ್ಟು ಬಿತ್ತನೆಯಾಗಿದ್ದು, ಸರಿಯಾಗಿ ಮಳೆ ಸುರಿಯದಿರುವುದರಿಂದ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗಿದೆ.

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 29,467 ಹೆಕ್ಟೇರ್ ಪ್ರದೇಶವನ್ನು ಬಿತ್ತನೆ ಪ್ರದೇಶವೆಂದು ಗುರುತಿಸಲಾಗಿದೆ. ಈ ಪೈಕಿ ಬ್ಯಾಡಗಿ ಹೋಬಳಿಯ 15 ಸಾವಿರ ಹೆಕ್ಟೇರ್, ಕಾಗಿನೆಲೆ ಹೋಬಳಿಯ 10 ಸಾವಿರ ಹೆಕ್ಟೇರ್ ಸೇರಿದಂತೆ ಒಟ್ಟು 25, 416 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಮೆಕ್ಕೆಜೋಳ 18 ಸಾವಿರ ಹೆಕ್ಟೇರ್, ಸೋಯಾಬಿನ್ 250 ಹೆಕ್ಟೇರ್, ಹತ್ತಿ 4 ಸಾವಿರ ಹೆಕ್ಟೇರ್, ತೊಗರಿ 100 ಹೆಕ್ಟೇರ್, ಶೇಂಗಾ 250 ಹೆಕ್ಟೇರ್ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ವರ್ಷ 400 ಹೆಕ್ಟೇರ್‌ನಲ್ಲಿ ಸೋಯಾಬೀನ್ ಬಿತ್ತುವ ಗುರಿಯಿತ್ತು. 300 ಹೆಕ್ಟೇರ್ ಈಗಾಗಲೇ ಬಿತ್ತನೆಯಾಗಿದ್ದು, ಅಲ್ಪ ಖರ್ಚಿನ ಎಣ್ಣೆಕಾಳು ಬೆಳೆಯತ್ತ ರೈತರು ಒಲವು ತೋರಿದ್ದಾರೆ.

ಮೇ ವಾಡಿಕೆ ಮಳೆ 75 ಮಿ.ಮೀ.. ವಾಸ್ತವದಲ್ಲಿ 109.73 ಮಿ.ಮೀ. ಮಳೆ ಸುರಿದಿದೆ. ಜೂನ್ ವಾಡಿಕೆ ಮಳೆ 96 ಮಿ.ಮೀ. ಪೈಕಿ 24 ದಿನಗಳಲ್ಲಿ 76.6 ಮಿ.ಮೀಟರ್ ಆಗಿದೆ. ಮಳೆ ವಾಡಿಕೆಗಿಂತ ಹೆಚ್ಚಿಗೆ ಸುರಿದಿದೆ. ಆದರೆ, ಹೆಚ್ಚು ಮಳೆ ಕೆಲವೇ ದಿನಗಳಲ್ಲಿ ಸುರಿದಿದೆ. ಮೇ- ಜೂನ್ 24ವರೆಗೆ 171 ಮಿ.ಮೀ. ವಾಡಿಕೆ ಮಳೆಯಾಗಬೇಕು. ಈವರೆಗೂ 186.33 ಮಿ.ಮೀ. ಮಳೆ ದಾಖಲಾಗಿದೆ. ಮುಖ್ಯವಾಗಿ ಕಾಗಿನೆಲೆ ಹಾಗೂ ಹೆಡಿಗ್ಗೊಂಡ ಮಳೆಮಾಪನದಲ್ಲಿ ಮೇನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾದರೆ, ಜೂನ್‌ನಲ್ಲಿ ಮಳೆ ಕೊರತೆಯಿದೆ. ಬ್ಯಾಡಗಿ ಕೇಂದ್ರದಲ್ಲಿ ಮೇನಲ್ಲಿ ಮಳೆ ಕೊರತೆ ದಾಖಲಾಗಿದ್ದು, ಜೂನ್‌ನಲ್ಲಿ 100 ಮಿ.ಮೀ. ದಾಟಿದೆ. ಹೀಗಾಗಿ ತಾಲೂಕಿನ ವಿವಿಧ ಭಾಗದಲ್ಲಿ ಮಳೆ ಬಿದ್ದ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಈಗಲೂ ಬಿತ್ತನೆಗೆ ಕೆಲ ಪ್ರದೇಶದಲ್ಲಿ ಹದವಿಲ್ಲ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲ ಭಾಗದಲ್ಲಿ ಈಗಾಗಲೇ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗಿದೆ.

ಕಳೆದ ನಾಲ್ಕಾರು ದಿನಗಳಿಂದ ಮೋಡಗಳು ದಟ್ಟವಾಗಿದ್ದರೂ ಮಳೆ ಸುರಿಯುತ್ತಿಲ್ಲ. ಬಹುತೇಕ ಬಿತ್ತನೆ ದಿನದಿಂದ ಹದವರ್ತಿ ಮಳೆಯಾಗಿಲ್ಲ. ಒಮ್ಮೆ ಸುರಿದ ಮಳೆ ಪುನಃ ಏಳೆಂಟು ದಿನ ಸುರಿಯುತ್ತಿಲ್ಲ. ಬೆಳೆಗಳು ಸದ್ಯ ನೋಡಲು ಹಸಿರಾಗಿವೆ. ಸದ್ಯ ಉತ್ತಮ ಮಳೆ ಬಾರದಿದ್ದರೆ ಹಲವೆಡೆಯ ಬೆಳೆಗಳ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಯಿದೆ. ಹೀಗಾಗಿ, ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ವರುಣನ ಕೃಪೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ರೈತರ ಚಿತ್ತ ಸಿರಿಧಾನ್ಯದತ್ತ: ಎರಡು ದಶಕಗಳಿಂದ ಸಿರಿಧಾನ್ಯ ಬೆಳೆಯಿಂದ ರೈತರು ದೂರು ಉಳಿದಿದ್ದರು. ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಸಿರಿಧಾನ್ಯಗಳತ್ತ ಮುಖ ಮಾಡಿದ್ದಾರೆ. ಅಲ್ಪನೀರು, ಕಡಿಮೆ ಖರ್ಚಿನ, ಉತ್ತಮ ಬೇಡಿಕೆ ಹಾಗೂ ದರವಿರುವ ಸಿರಿಧಾನ್ಯಗಳಾದ ಹಾರಕ, ಸಾವೆ, ಊದಲು, ಕೊರಕ, ನವಣೆ, ಸಜ್ಜೆ, ರಾಗಿ ಬೆಳೆಯಲು ಮುಂದಾಗಿದ್ದಾರೆ.

ಈವರೆಗೂ ಬಿತ್ತನೆ ಮಾಡದ ರೈತರು ಮುಂದೆ ಸೂರ್ಯಕಾಂತಿ ಹಾಗೂ ಸಿರಿಧಾನ್ಯ ಬೆಳೆಯಬಹುದು. ಈ ಬೆಳೆಗಳು ಕಡಿಮೆ ತೇವಾಂಶ ಇದ್ದರೂ ಬೆಳೆಯುತ್ತವೆ. ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ಪದ್ಧತಿ ರೂಢಿಸಿಕೊಂಡು ಮಳೆ ನೀರು ಹರಿದು ಹೋಗುವುದನ್ನು ತಡೆದು ಹೊಲದಲ್ಲಿ ಇಂಗಿಸಬೇಕು. ಇದರಿಂದ ಬಹಳ ದಿನಗಳವರೆಗೆ ತೇವಾಂಶ ಕಾಪಾಡಿಕೊಳ್ಳಬಹುದು.ಗಣೇಶ ಜೆ. ಕಮ್ಮಾರ, ಸಹಾಯಕ ಕೃಷಿ ನಿರ್ದೇಶಕ ಬ್ಯಾಡಗಿ ಮುಂಗಾರು ಮಳೆ ಕೊರತೆಯಿಂದ ಬೆಳೆ ಹುಲುಸಾಗಿ ಬೆಳೆದಿಲ್ಲ. ಸಮರ್ಪಕ ಮಳೆಯಿಲ್ಲದೆ ರೈತರು ಆತಂಕ ಎದುರಿಸುವಂತಾಗಿದೆ. ಸಕಾಲಕ್ಕೆ ಬಿತ್ತನೆ ಕೂಡ ಆಗಿಲ್ಲ. ಜೂನ್ ಮುಗಿಯುತ್ತಾ ಬಂದರು ಜಾನುವಾರುಗಳಿಗೆ ಎಲ್ಲಿಯೂ ಮೇವಿಲ್ಲ. ಕೆರೆಕಟ್ಟೆಗಳಲ್ಲಿ ಹನಿ ನೀರು ಸಂಗ್ರಹವಾಗಿಲ್ಲ. ಸರ್ಕಾರ ಹಿಂದಿನ ವರ್ಷದ ಬೆಳೆ ವಿಮೆ ಸಮರ್ಪಕವಾಗಿ ಬಿಡುಗಡೆ ಮಾಡಬೇಕು. ಪ್ರಸಕ್ತ ಸಾಲಿನಿಂದ ವಿಮೆ ಕಂತು ತುಂಬಿಸಿಕೊಳ್ಳುವಾಗ ವಿಮೆ ಹಣ ಬಿಡುಗಡೆ ಅವಧಿಯನ್ನು ಘೋಷಿಸಬೇಕು.ನಿಂಗಪ್ಪ ಮಾಸಣಗಿ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net