ಆಧುನಿಕತೆಯಲ್ಲಿ ಅಂತಃಕರಣದ ಕೊರತೆ

6
Published on

ಮೈಸೂರು: ಜಗತ್ತು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕಾದರೆ ಪ್ರತಿಯೊಬ್ಬರಲ್ಲಿಯೂ ಅರಿವಿನ ಜ್ಞಾನ ಮುಖ್ಯ ಎಂದು ದೀನಬಂಧು ಮಕ್ಕಳ ಮನೆ ಸಂಸ್ಥಾಪಕ ಡಾ.ಜಿ.ಎಸ್.ಜಯದೇವ ತಿಳಿಸಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಗುರುವಾರ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಎಸ್‌ಎಸ್ ಅವರ ಕವಿತೆಗಳಲ್ಲಿ ಪ್ರೀತಿ, ಬೆಳಕು ಹಾಗೂ ಪ್ರೀತಿಯೆಂಬುದು ಜೀವನದ ಪ್ರಮುಖ ಘಟ್ಟವಾಗಿ ಹೇಗೆ ಮುಖ್ಯ ಎಂಬುದನ್ನು ತಿಳಿಯಬಹುದು ಎಂದರು.

ಆಧುನಿಕ ಜಗತ್ತಿನಲ್ಲಿ ಹಣದ ಕೊರತೆ ಇಲ್ಲ. ಬದಲಿಗೆ ಅಂತಃಕರಣದ ಕೊರತೆ ಇದೆ. ಇಂದಿನ ಯುವ ಜನಾಂಗವನ್ನು ದೂರ ಸಂಪರ್ಕ ಮಾಧ್ಯಮಗಳು ದಿಕ್ಕು ತಪ್ಪಿಸುತ್ತಿವೆ. ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಲು ಕಾರಣವಾಗುತ್ತಿವೆ. ಮನುಷ್ಯನ ಜೀವನ ಚೆನ್ನಾಗಿರಬೇಕಾದರೆ ಪ್ರತಿಯೊಂದು ನಡಿಗೆಯಲ್ಲೂ ವೈಚಾರಿಕ ಸ್ಪಷ್ಟತೆ ಇರಬೇಕು ಎಂದರು.

ಜಿಎಸ್‌ಎಸ್ ಅವರಿಗೆ ಕುವೆಂಪು ಅವರ ಹಲವು ಪುಸ್ತಕಗಳು ಸಾಕಷ್ಟು ಪ್ರಭಾವ ಬೀರಿದವು. ಶರಣ ಧರ್ಮದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತೆ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಅದೇ ರೀತಿಯ ಸಮಾನ ಆದ್ಯತೆ ನೀಡಬೇಕೆಂಬುದೆ ಅವರ ಕೃತಿಗಳ ಆಶಯವಾಗಿತ್ತು ಎಂದು ಹೇಳಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಸಂಧ್ಯಾರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net