

ರಾಘವೇಂದ್ರ ಪೈ ಗಂಗೊಳ್ಳಿ, ಕುಂದಾಪುರ
ತ್ರಾಸಿ-ಮರವಂತೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಬೀಚ್ ಅಭಿವೃದ್ಧಿ ಮರಿಚೀಕೆಯಾಗಿಯೇ ಉಳಿದಿದೆ. ಇಲ್ಲಿ ಪ್ರವಾಸಿಗರನ್ನು ಕಾಡುತ್ತಿರುವ ಮೂಲಸೌಲಭ್ಯ ಕೊರತೆಯಿಂದ ಬೀಚ್ ಹೆಸರು ಹಾಳಾಗುತ್ತಿದೆ.
ಒಂದು ಕಡೆ ಅರಬ್ಬೀ ಸಮುದ್ರ ಇನ್ನೊಂದು ಕಡೆ ಸೌಪರ್ಣಿಕಾ ನದಿ ಇವೆರಡರ ಮಧ್ಯೆ ಸಾಗುವ ರಾಷ್ಟ್ರೀಯ ಹೆದ್ದಾರಿ. ಇಂತಹ ವೈಶಿಷ್ಯ ಪೂರ್ಣ ಕಡಲ ತಡಿ ದೇಶದಲ್ಲಿ ಕಾಣಸಿಗುವುದು ಅಪೂರ್ವ. ರಾ.ಹೆದ್ದಾರಿ 66ಕ್ಕೆ ಚಾಚಿಕೊಂಡಿರುವ ಬೀಚ್ ಬಂಡೆಗಳ ಮೇಲೆ ನೂರಾರು ಪ್ರವಾಸಿಗರು ಪ್ರತಿನಿತ್ಯ ಸಮುದ್ರ ಸೌಂದರ್ಯ ಆಸ್ವಾದಿಸುವ ನೋಟ ಎಂತವರನ್ನೂ ತನ್ನತ್ತ ಸೆಳೆಯುವಂತಿದೆ. ಕಳೆದ ವರ್ಷ ಪ್ರಾರಂಭವಾದ ವಾಟರ್ ಸ್ಪೋರ್ಟ್ಸ್ ಮತ್ತು ಸ್ಕೈ ಡೈನ್‌ಗೆ ಉತ್ತಮ ಸ್ಪಂದನೆ ಕಂಡುಬರುತ್ತಿದ್ದು, ಮೂಲಸೌಲಭ್ಯ ಕೊರತೆ ಕಾಡುತ್ತಿದೆ.
ಬೀಚ್‌ಗೆ ಬರುವ ಪ್ರವಾಸಿಗರ ವಾಹನ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರವಾಸಿಗರು ತಮ್ಮ ವಾಹನ ಹೆದ್ದಾರಿ ಪಕ್ಕದಲ್ಲೇ ಪಾರ್ಕಿಂಗ್ ಮಾಡುವ ಅನಿವಾರ್ಯತೆಯಿದೆ. ಇದರಿಂದ ಹೆದ್ದಾರಿ ಮೇಲೆ ಸಂಚರಿಸುವ ಇತರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಾ.ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಸಮಸ್ಯೆ ಉದ್ಭವಿಸುತ್ತಿದ್ದು, ಅಪಘಾತಗಳು ಕೂಡ ನಡೆದಿದೆ.
ಬೀಚ್ ಗಾರ್ಡನ್‌ನಲ್ಲಿ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳ ಸಂಕೀರ್ಣ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಅದರಲ್ಲಿ ಈವರೆಗೆ ಒಂದೇ ಒಂದು ಅಂಗಡಿ ತೆರೆದುಕೊಂಡಿಲ್ಲ. ಇದರ ಪರಿಣಾಮವೆಂಬಂತೆ ಕಡಲ ತೀರದುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಗೂಡಂಗಡಿಗಳು ಹೆಚ್ಚಾಗುತ್ತಿದ್ದು, ರಾ.ಹೆದ್ದಾರಿಯಲ್ಲಿ ಸಾಗುವ ವಾಹನಗಳು ಅಲ್ಲಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವುದರಿಂದ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ.
ಬೀಚ್‌ಗೆ ಬರುವ ಪ್ರವಾಸಿಗರ ಚಲನವಲನ ವೀಕ್ಷಿಸಲು ಹೊಸದಾಗಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು, ಸಿಬ್ಬಂದಿ ನಿಯೋಜಿಸಲಾಗಿದೆ. ಸಮುದ್ರ ಸೌಂದರ್ಯ ಆಸ್ವಾದಿಸುವ ಬಂಡೆಗಳ ಮೇಲೆ ಪಯಣಿಸುವ ಪ್ರವಾಸಿಗರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ನೀರಿಗೆ ಇಳಿಯದಂತೆ ಪೊಲೀಸ್ ಇಲಾಖೆ ತ್ರಾಸಿ-ಮರವಂತೆ ಕಡಲ ತೀರದ ಅನೇಕ ಕಡೆಗಳಲ್ಲಿ ನಾಮಫಲಕ ಅಳವಡಿಸಿದ್ದಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಗೃಹರಕ್ಷಕ ದಳ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕೋಟ್ಯಂತರ ರೂ.ವೆಚ್ಚದಲ್ಲಿ ಬೀಚ್ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ ಎಂಬ ಆರೋಪ ಒಂದೆಡೆಯಾದರೆ ಬೀಚ್‌ನಲ್ಲಿ ದಶಕಗಳಿಂದ ಕಾಡುತ್ತಿರುವ ಮೂಲ ಸೌಲಭ್ಯ ಕೊರತೆ ಬಗೆಹರಿಸಲು ಸರ್ಕಾರ ಕ್ರಮವಹಿಸುತ್ತಿಲ್ಲ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಮಹಿಳೆಯರು, ಮಕ್ಕಳು, ಹಿರಿಯರು ಬೀಚ್‌ಗೆ ಸಮಯದ ಕಳೆಯಲು ಆಗಮಿಸುತ್ತಿದ್ದರೂ ಬೀಚ್ ಬಳಿ ಆಹಾರ ಮತ್ತು ವಸತಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಖಾಸಗಿ ಬೆರಳಣಿಕೆಯ ವಸತಿಗೃಹಗಳಿದ್ದರೂ ಪ್ರವಾಸಿಗರ ಬೇಡಿಕೆಗೆ ಅವುಗಳು ಸಾಕಾಗದು ಎಂಬ ಕೊರಗಿದೆ. ಶೌಚಗೃಹ ಮತ್ತು ಸ್ನಾನ ಇದ್ದೂ ಇಲ್ಲದಂತಾಗಿದೆ. ಇದರಿಂದ ಪ್ರವಾಸಿಗರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ.
ಬೀಚ್ ಗಾರ್ಡನ್ ಪಕ್ಕದಲ್ಲಿ ಮತ್ತು ಇತರ ಕಡೆಗಳಲ್ಲಿ ಪ್ರವಾಸಿಗರು ಎಸೆದು ಹೋಗುವ ತ್ಯಾಜ್ಯ ಸಂಗ್ರಹಿಸಲು ಅಳವಡಿಸಿರುವ ಕಸದ ಬುಟ್ಟಿ ತುಂಬಿ ತುಳುಕುತ್ತಿದೆ. ಅದರಿಂದ ಹೊರಬಿದ್ದ ಕಸ ಮತ್ತು ತ್ಯಾಜ್ಯ ಅಸಹನೀಯ ನೋಟಕ್ಕೆ ಕಾರಣವಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಮುಂದಾಗದಿರುವುದು ಮತ್ತು ಪ್ರತಿದಿನ ಕಸದ ಬುಟ್ಟಿ ಸ್ವಚ್ಛಗೊಳಿಸಲು ಕ್ರಮ ಕ್ರಮಕೈಗೊಳ್ಳದಿರುವುದು ತ್ಯಾಜ್ಯ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತಿದೆ.
ತ್ರಾಸಿ-ಮರವಂತೆ ಬೀಚ್‌ನಲ್ಲಿ ಮೂಲ ಸೌಕರ್ಯಗಳಿಲ್ಲ. ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆಗಳಿಲ್ಲ. ಆಹಾರ ಮತ್ತು ವಸತಿಗೆ ಕೂಡ ಪ್ರವಾಸಿಗರು ಪರದಾಡುವ ಸ್ಥಿತಿ ಇದೆ. ಬೀಚ್ ಅಭಿವೃದ್ಧಿಗೆ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತಿದ್ದರೂ ಬೀಚ್ ಅಭಿವೃದ್ಧಿ ಮಾತ್ರ ಆಮೆನಡಿಗೆಯಲ್ಲಿ ಸಾಗುತ್ತಿದೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಕ್ರಮವಹಿಸಬೇಕು. -ಉದಯ ಖಾರ್ವಿ ತ್ರಾಸಿ https://www.vijayavani.net/increase-your-zest-for-life-even-after-retirement https://www.vijayavani.net/venkatalakshmi-towers-inaugurated-in-kumbhashi%e0%b2%a5