ಬ್ಯಾಡಗಿ ಕ್ರೀಡಾಂಗಣಕ್ಕೆ ಮೂಲಸೌಕರ್ಯ ಕೊರತೆ

GROUND
Published on

ಬ್ಯಾಡಗಿ: ತಾಲೂಕು ಕ್ರೀಡಾಂಗಣದಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ಕ್ರೀಡಾಪಟುಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೃಹತ್ ಕಟ್ಟಡ ನಿರ್ವಹಣೆಗೆ ಲಕ್ಷಾಂತರ ರೂ. ವೆಚ್ಚವಾದರೂ ಕುಡಿಯುವ ನೀರು ಹಾಗೂ ಶೌಚಗೃಹ ವ್ಯವಸ್ಥೆ ಇಲ್ಲದಂತಾಗಿದೆ. ಕ್ರೀಡಾಂಗಣದಲ್ಲಿನ ಶೌಚಗೃಹಗಳಿಗೆ ನೀರು, ವಿದ್ಯುತ್ ಪೂರೈಕೆ ಇಲ್ಲ. ಹೀಗಾಗಿ ಶೌಚಗೃಹಗಳಿಗೆ ಬೀಗ ಜಡಿಯಲಾಗಿದೆ.

ಕಳೆದ ವರ್ಷ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿ, ಪೈಪ್‌ಲೈನ್, ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಪುರುಷರು, ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ವಿವಿಧ ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳಿಗೆ ಆಗಮಿಸುವ ಜನರು ಪರದಾಡುವಂತಾಗಿದೆ. ಈ ಕುರಿತು ವಿವಿಧ ಸಂಘಟನೆಗಳು ಹೋರಾಟ ನಡೆಸಿ, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಸಾರ್ವಜನಿಕರ ವೀಕ್ಷಣಾ ಗ್ಯಾಲರಿ ಪಕ್ಕದಲ್ಲಿ ನಿರ್ಮಿಸಿದ ಎಂಟು ಶೌಚಗೃಹಗಳು ಅನೇಕ ವರ್ಷಗಳಿಂದ ಹಾಳು ಬಿದ್ದು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಆದರೆ, ಇಂದಿಗೂ ಸಮಸ್ಯೆ ಇತ್ಯರ್ಥಗೊಂಡಿಲ್ಲ. ಸ್ಥಳೀಯ ಶಾಸಕರು ಸಾಕಷ್ಟು ಬಾರಿ ನಿರ್ದೇಶನ ನೀಡಿದರೂ ವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಕಳೆದ 10 ವರ್ಷಗಳಿಂದ ಒಮ್ಮೆಯೂ ಸ್ಥಳೀಯರೊಂದಿಗೆ ಕ್ರೀಡಾಧಿಕಾರಿಗಳು ಸಭೆ ನಡೆಸಿಲ್ಲ.

ನಾಮಫಲಕವಿಲ್ಲ

ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತುಂಬಿಸಿಕೊಂಡ ಶುಲ್ಕ ಕುರಿತು ಮಾಹಿತಿ ಸಿಗುತ್ತಿಲ್ಲ. ಅಲ್ಲದೆ, ಈ ಕಟ್ಟಡದ ಬಳಿ ಸಂಬಂಧಿಸಿದ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆ, ಶುಲ್ಕ ಭರಿಸುವ ನಿಗದಿತ ನಾಮಫಲಕ ಹಾಕಿಲ್ಲ.

ಸಿಸಿ ಕ್ಯಾಮರಾ ಅಳವಡಿಸಿಲ್ಲ

ಕ್ರೀಡಾಂಗಣದಲ್ಲಿ ನಡೆಯುವ ಅನೈತಿಕ ಚಟುವಟಿಕೆ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರೂ ಕ್ರೀಡಾ ಇಲಾಖೆ ಮೌನ ವಹಿಸಿದೆ. ಏನಾದರೂ ಅವಘಡಗಳು ಜರುಗಿದ ಬಳಿಕ ಕ್ರಮಕ್ಕೆ ಮುಂದಾಗುವುದನ್ನು ಬಿಟ್ಟು ಕೂಡಲೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೌಚಗೃಹಗಳಿಗೆ ಬೀಗ ಹಾಕಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ. ಬೃಹತ್ ಕಟ್ಟಡದಲ್ಲಿ ಇಂದಿಗೂ ವಿದ್ಯುತ್ ವ್ಯವಸ್ಥೆ ಮಾಡಿಲ್ಲ. ಕ್ರೀಡಾಂಗಣಕ್ಕೆ ನಿತ್ಯ ಮಹಿಳೆಯರು, ಬಾಲಕಿಯರು ಆಗಮಿಸುತ್ತಿದ್ದು, ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು. ಮಲ್ಲೇಶಪ್ಪ ಚಿಕ್ಕಣ್ಣನವರ, ಮಾಜಿ ಸೈನಿಕ ಶೌಚಗೃಹಗಳನ್ನು ದುರಸ್ತಿ ಮಾಡಿಸಿ, ಸ್ವಚ್ಛತೆ ಕೈಗೊಂಡು ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಪುನಃ ಹಾಳಾಗಿವೆ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆಯಲು ಸೂಚನೆ ನೀಡಲಾಗಿದೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಎಲ್ಲ ಸಮಸ್ಯೆಗಳು ಪ್ರಸ್ತಾಪವಾಗಿವೆ. ಅನುಮೋದನೆ ಬಳಿಕ ಜಿಲ್ಲೆಯ ಎಲ್ಲ ಕ್ರೀಡಾಂಗಣಗಳಲ್ಲಿ ಕಾರ್ಯಕ್ರಮ ಸೇರಿದಂತೆ ಇತ್ಯಾದಿಗಳ ಶುಲ್ಕ ವಸೂಲಿ, ಸೂಚನೆ ಹಾಗೂ ಸಿಬ್ಬಂದಿ ನಾಮಫಲಕ, ದೂರವಾಣಿ ಸಂಖ್ಯೆ ಅಳವಡಿಸುತ್ತೇವೆ. ಲತಾ ಪಿ.ಎಚ್., ಜಿಲ್ಲಾ ಯುವಜನ ಕ್ರೀಡಾಇಲಾಖೆ ಸಹಾಯಕ ನಿರ್ದೇಶಕಿ ತಾಲೂಕು ಕ್ರೀಡಾಂಗಣದಲ್ಲಿ ಜರುಗುವ ಪಂದ್ಯಾವಳಿ ಹಾಗೂ ಕ್ರೀಡೆಗಳನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಶೌಚಗೃಹ ಸೇರಿದಂತೆ ಮೂಲಭೂತ ಸೌಲಭ್ಯ ಇಲ್ಲವಾಗಿದೆ. ಇದರಿಂದ ಮಹಿಳಾ ಕ್ರೀಡಾಪಟುಗಳು, ಶಿಕ್ಷಕಿಯರು, ಕ್ರೀಡಾಭಿಮಾನಿಗಳು ತೊಂದರೆ ಅನುಭವಿಸಬೇಕಿದೆ. ಕ್ರೀಡಾಪಟುಗಳು ಸೇರಿದಂತೆ ಸಾರ್ವಜನಿಕರಿಗೂ ಶುದ್ಧ ಕುಡಿಯುವ ವ್ಯವಸ್ಥೆ ಇಲ್ಲ. ಕೂಡಲೆ ಸಂಬಂಧಿಸಿದವರು ವ್ಯವಸ್ಥೆ ಕೈಗೊಳ್ಳಬೇಕು. ಮೋಹನಕುಮಾರ ಹುಲ್ಲತ್ತಿ, ಕಬಡ್ಡಿ ಕ್ರೀಡಾಪಟು ಬ್ಯಾಡಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net