ಅಂಗನವಾಡಿಗಿಲ್ಲ ಮೂಲಸೌಕರ್ಯ

anganavadi
ಬೊಳ್ಳೆಟ್ಟು ಪರಿಸರದಲ್ಲಿರುವ ಅಂಗನವಾಡಿ ಕೇಂದ್ರ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನಕ್ಸಲ್ ಪೀಡಿತ ಪ್ರದೇಶ ಈದು ಗ್ರಾಮದ ಬೊಳ್ಳೆಟ್ಟು ಪರಿಸರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಮೂಲಸೌಕರ್ಯಗಳೇ ಇಲ್ಲವಾಗಿದ್ದು, ಇದುವರೆಗೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇದರತ್ತ ಗಮನಹರಿಸಿಲ್ಲ.

ಸುಮಾರು 65 ಕುಟುಂಬಗಳಿರುವ ಈದು ಗ್ರಾಮದಲ್ಲಿ ಇದು ಏಕೈಕ ಅಂಗವಾಡಿಯಾಗಿದ್ದು, ಕೇಂದ್ರಕ್ಕೆ ಹಾಗೂ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯಗಳ್ಯಾವುದೂ ಇಲ್ಲಿಲ್ಲ. ಇಲ್ಲಿ ಪ್ರತೀ ವರ್ಷವೂ ಸುಮಾರು 10-15 ಮಕ್ಕಳು ಕಲಿತು ತೆರಳುತ್ತಾರೆ.

ಅಂಗವಾಡಿ ಕಟ್ಟಡಕ್ಕೆ ಸ್ವಂತ ಕಾಂಪೌಂಡ್ ಇಲ್ಲ. ಮಕ್ಕಳು ಆಟವಾಡುವ ಸಂದರ್ಭ ಅಂಗನವಾಡಿ ವ್ಯಾಪ್ತಿಯಿಂದ ಹೊರಬರುವ ಅಪಾಯವಿದ್ದು, ಜತೆಗೆ ಕೇಂದ್ರದ ಸುತ್ತಲೂ ಹಸುಗಳು, ಬೀದಿನಾಯಿಗಳ ಹಾವಳಿಯಿರುವುದರಿಂದ ಸ್ವಂತ ಕಾಂಪೌಂಡ್ ಅಗತ್ಯವಿದೆ. ಇದರ ನಿರ್ಮಾಣಕ್ಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆಯ ಅಭಿವೃದ್ಧಿಯೂ ಅಗತ್ಯ: ಅಂಗನವಾಡಿಗೆ ಸಾಗಲು ಸೂಕ್ತ ರಸ್ತೆಗಳಿಲ್ಲದ ಕಾರಣ ಪುಟ್ಟ ಮಕ್ಕಳು ಕಿಲೋಮೀಟರ್‌ಗಟ್ಟಲೇ ನಡೆದುಕೊಂಡೇ ಕೇಂದ್ರಕ್ಕೆ ಬರಬೇಕಿದೆ. ಈ ವೇಳೆ ಅಪಾಯಕಾರಿಯಾಗಿರುವ ನದಿಯನ್ನೂ ದಾಟಿಕೊಂಡು ಬರಬೇಕಿದ್ದು, ಸೇತುವೆಯ ಅವಶ್ಯಕತೆಯೂ ಇದೆ. ಸೂಕ್ತ ಮೂಲಸೌಕರ್ಯಗಳು ಲಭ್ಯವಿದ್ದರೆ ಮಾತ್ರ ಮಕ್ಕಳು ಸುಸೂತ್ರವಾಗಿ ಶಿಕ್ಷಣ ಪಡೆಯಲು ಸಾಧ್ಯ ಎಂಬುದು ಇಲ್ಲಿನ ಜನರ ಆಗ್ರಹ.

ಪ್ರತ್ಯೇಕ ನಲ್ಲಿ ನೀರು ಅವಶ್ಯ

ಬೊಳ್ಳೆಟ್ಟು ಅಂಗನವಾಡಿ ಕೇಂದ್ರಕ್ಕೆ ಪಂಚಾಯಿತಿ ಕಡೆಯಿಂದಾಗಲಿ ಅಥವಾ ಇನ್ಯಾವುದೇ ಮೂಲಗಳಿಂದ ಸ್ವಂತ ನೀರಿನ ವ್ಯವಸ್ಥೆಗಳಿಲ್ಲ. ಸ್ಥಳೀಯ ನಿವಾಸಿಯೊಬ್ಬರು ತಮ್ಮ ಸ್ವಂತ ಜಮೀನನ್ನು ಅಂಗನವಾಡಿಗಾಗಿ ನೀಡಿದ್ದು, ಜತೆಗೆ ತಮ್ಮ ಜಾಗದಲ್ಲಿರುವ ಬಾವಿಯಿಂದ ಅಂಗನವಾಡಿಗೆ ನೀರು ಪೂರೈಸುತ್ತಿದ್ದಾರೆ. ಅಂಗನವಾಡಿಯೊಂದಿಗೆ 65 ಕುಟುಂಬಗಳಿಗೂ ನಲ್ಲಿ ನೀರಿನ ವ್ಯವಸ್ಥೆಗಳಿಲ್ಲ. ಈ ಕಾರಣಕ್ಕಾಗಿ ಇಲ್ಲಿನ ನದಿಯಲ್ಲಿ ಪೈಪ್‌ಲೈನ್ ಅಳವಡಿಸಲು ಅಸಾಧ್ಯವಾಗಿದೆ ಎಂಬುದು ಸ್ಥಳೀಯರ ಅಸಮಾಧಾನ.

ನಮ್ಮ ಬೊಳ್ಳೆಟ್ಟು ಪರಿಸರಕ್ಕೆ ಇರುವ ಏಕೈಕ ಅಂಗನವಾಡಿ ಕೇಂದ್ರಕ್ಕೆ ಮೂಲಸೌಕರ್ಯದ ಅಗತ್ಯವಿದೆ. ಅಂಗನವಾಡಿಯ ಸುತ್ತ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸುವ ಅಗತ್ಯವಿದೆ. ಇದರಿಂದ ಇತರ ಪ್ರಾಣಿಗಳು ಅಂಗನವಾಡಿ ಕೇಂದ್ರದ ಬಳಿ ಬರುವುದು ತಪ್ಪುತ್ತದೆ. -ರಮೇಶ್ ಸ್ಥಳೀಯರು. ಪುಟ್ಟ ಕಂದಮ್ಮಗಳ ಹಿತ ದೃಷ್ಠಿಯಿಂದ ಅಂಗನವಾಡಿ ಕೇಂದ್ರದ ಸುತ್ತ ತಡೆಗೋಡೆಯ ನಿರ್ಮಾಣದ ಅಗತ್ಯವಿದೆ. ಈಗಾಗಲೇ ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಮುಂದೆ ನಮ್ಮ ಅಳಲನ್ನು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. -ಜ್ಯೋತಿ ಗ್ರಾಮಸ್ಥರು https://www.vijayavani.net/busstand-provided-by-dharmashree-foundation https://www.vijayavani.net/achievement-of-kutchur-school-students

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net