

ಭದ್ರಾವತಿ: ಜನರ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥೃ ಕಾಪಾಡುವ ಪೌರಕಾರ್ಮಿಕರು ನಮಗೆ ದೈವ ಸ್ವರೂಪಿಗಳಿದ್ದಂತೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಶನಿವಾರ ನಗರಸಭೆ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿದ ಅವರು, ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗಾಗಿ 60 ಸಾವಿರ ಕೋಟಿ ರೂ. ಬಳಕೆ ಮಾಡಿಕೊಂಡ ಪರಿಣಾಮ ನಗರದಲ್ಲ್ಲಿ ಅನುದಾನದ ಕೊರತೆಯಿಂದಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ 35 ವಾರ್ಡ್‌ನ ಎಲ್ಲ ಸದಸ್ಯರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗುವುದು ಎಂದರು.
ವಿಐಎಸ್‌ಎಲ್‌ಗೆ ರಾಜ್ಯ ಸರ್ಕಾರ ಗಣಿ ಕೊಟ್ಟಿದೆ. ಆದರೆ ಕೇಂದ್ರ ಸರ್ಕಾರ ಬಂಡವಾಳ ತೊಡಗಿಸಿಲ್ಲ. ಎಂಪಿಎಂ ಪುನರಾರಂಭಿಸುವ ಭರವಸೆ ಚುನಾವಣೆಗೂ ಮುನ್ನವೇ ನೀಡಿದ್ದೆ. 4 ಬಾರಿ ಆಯ್ಕೆ ಮಾಡಿರುವ ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ. ಎಂಪಿಎಂ ಪುನರಾರಂಭಿಸುವ ಮೂಲಕ ಋಣವನ್ನು ತೀರಿಸುತ್ತೇನೆ. ಇಲ್ಲವಾದರೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುತ್ತೇನೆ ಎಂದರು.
37 ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ದಿನಗೂಲಿ ನೌಕರರಾಗಿ ದುಡಿಯುತ್ತಿದ್ದ 20 ಪೌರಕಾರ್ಮಿಕರಿಗೆ ಕಾಯಂ ಆದೇಶ ಪ್ರತಿ ವಿತರಿಸಲಾಯಿತು. ನಗರದ ರಂಗಪ್ಪ ವೃತ್ತದಿಂದ ಬಿ.ಎಚ್.ರಸ್ತೆ ಮಾರ್ಗವಾಗಿ ಮಂಜುನಾಥ ಕಲ್ಯಾಣ ಮಂಟಪದವರೆಗೂ ನಗರದ ಪ್ರಮುಖ ರಸ್ತೆಯಲ್ಲಿ ಪೌರಕಾರ್ಮಿಕರು, ನಗರಸಭೆ ಅಧಿಕಾರಿಗಳು, ನಗರಸಭೆ ಸದಸ್ಯರು ಮೆರವಣಿಗೆ ನಡೆಸಿದರು.
ನಗರಸಭೆ ಪೌರಾಯುಕ್ತ ಮನುಕುಮಾರ್, ಅಧ್ಯಕ್ಷೆ ಶ್ರುತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸುದೀಪ್, ಬಿ.ಕೆ.ಮೋಹನ್, ಚನ್ನಪ್ಪ, ಸರೋಜಮ್ಮ, ಅಬ್ಬಯ್ಯ, ಕದಿರೇಶ್, ಪ್ರಭಾಕರ್, ರಾಜ್‌ಕುಮಾರ್, ಮಂಜುನಾಥ್, ಚೇತನ್ ಕುಮಾರ್, ಕಾಂತರಾಜ್, ಬಸವರಾಜ್ ಆನೆಕೊಪ್ಪ, ಅನುಸುಧಾ ಮೋಹನ್ ಇತರರಿದ್ದರು.