ಕ್ರೀಡಾಕೂಟಕ್ಕೆ ಅನುದಾನದ ಕೊರತೆ

24 CRP-1B
ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2025- 25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಎನ್.ಅನಿಲ್, ಕೆ.ಟಿ.ಆನಂದ್, ರಂಗನಾಥ್, ರವಿಕುಮಾರ್ ಇದ್ದರು.
Published on

ಚನ್ನರಾಯಪಟ್ಟಣ: ಕ್ರೀಡಾಕೂಟಗಳು ಅನುದಾನದ ಕೊರತೆಯಿಂದಾಗಿ ಕ್ರೀಡಾಪಟುಗಳ ಆಟೋಟಕ್ಕೆ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಯುವ ಸಬಲೀಕರಣ ಮತ್ತು ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಯೋಗದಲ್ಲಿ 2025-26ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಠ್ಯದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು ಎಂಬ ಮಾತು ಕ್ರೀಡಾಕೂಟಗಳ ಭಾಷಣಕ್ಕೆ ಸಿಮೀತವಾಗಿದೆ. ಸೌಲಭ್ಯ ಮಾತ್ರ ಸಂಪೂರ್ಣ ಮರಿಚೀಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಫೂರ್ತಿ ಕಮರುತ್ತಿದೆ ಎಂದರು.

ಸರ್ಕಾರದ ಕ್ರೀಡಾ ಇಲಾಖೆಗೆ ನೀಡುತ್ತಿರುವ ಕಡಿಮೆ ಅನುದಾನದಿಂದ ಕ್ರೀಡಾ ಚಟುವಟಿಕೆ ಕುಂಠಿತಗೊಂಡಿದೆ. ಸರ್ಕಾರ 500 ಕೋಟಿ ರೂ. ಅನುದಾನವನ್ನು ಕ್ರೀಡಾ ಇಲಾಖೆಗೆ ಮೀಸಲಿಟ್ಟರೆ ವ್ಯವಸ್ಥಿತವಾದ ಕ್ರೀಡಾಕೂಟಗಳ ಆಯೋಜನೆಯಿಂದ ಗ್ರಾಮೀಣ ಮಟ್ಟದಲ್ಲಿ ಇರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಆಗುತ್ತದೆ ಎಂದರು.

ಮೈಸೂರು ದಸರಾಗೆ ತನ್ನದೇ ಆದ ಇತಿಹಾಸ ಇದೆ. ನಾಡಹಬ್ಬ ದಸರಾ ನೋಡಲು ಲಕ್ಷಾಂತರ ಜನರು ಬರುತ್ತಾರೆ. ಶ್ರದ್ಧಾ, ಭಕ್ತಿಗೆ ಸಾಕ್ಷಿಯಾದ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋಗೆ ಅನುಮತಿ ನೀಡಿರುವುದಕ್ಕೆ ರಕ್ಷಣಾ ಸಚಿವ ರಮನಾಥ್ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್ ಧ್ವಜಾರೋಹಣ ನೆರವೇರಿಸಿದರ. ತಾಲೂಕು ಯುವ ಸಬಲೀಕರಣ ಕ್ರೀಡಾ ಸಮಿತಿಯ ಕಾರ್ಯದರ್ಶಿ ಕೆ.ಟಿ.ಆನಂದ್ ಪ್ರಾಸ್ತವಿಕ ನುಡಿಗಳನಾಡಿದರು. ವಾಲಿಬಾಲ್ ತರಬೇತುದಾರ ರಮೇಶ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಪ್ರತಾಪ್, ಖಜಾಂಚಿ ಡೆನಿಯಲ್ ರೋನಾಲ್ಡ್, ಲೋಕೇಶ್ ರಂಗೇಗೌಡ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಬಿ.ಎಚ್.ಆನಂದ್, ಕಾರ್ಯದರ್ಶಿ ಬಿ.ಎಸ್.ಮಂಜಶೆಟ್ಟಿ, ಕೆ.ಎ.ಪ್ರಕಾಶ್, ತಾಲೂಕು ನೌಕರರ ಸಂಘದ ನಿರ್ದೇಶಕ ರಂಗನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ವರಿ, ಆರಕ್ಷಕ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ತಾಲೂಕಿನ ಶಿಕ್ಷಣ ಇಲಾಖೆಯ ಸಂಘಗಳ ಎಲ್ಲ ಪದಾಧಿಕಾರಿಗಳು ಸದಸ್ಯರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net