

ಮಂಜುನಾಥ ಎಸ್. ಅಂಗಡಿ ಧಾರವಾಡ
ರಾಜ್ಯ ಸರ್ಕಾರ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಿದೆ, ಪರಿಣಾಮ ಹಲವು ಯೋಜನೆಗಳಿಗೆ ಕೊಕ್ಕೆ ಹಾಕಲಾಗಿದೆ. ಇದಕ್ಕೆ ನಿದರ್ಶನ ಧಾರವಾಡ ರಂಗಾಯಣ. ರಂಗ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರಂಗಾಯಣದ ಅನುದಾನಕ್ಕೂ ಸರ್ಕಾರ ಕತ್ತರಿ ಹಾಕಿದೆ! ಅಗತ್ಯ ಅನುದಾನ ನೀಡದೆ ಇರುವುದರಿಂದ ಇದ್ದುದರಲ್ಲೇ ರಂಗಾಯಣ ನಡೆಸಿ ಎನ್ನುತ್ತಿರುವ ಸರ್ಕಾರದ ನಡೆಗೆ ರಂಗಾಸಕ್ತರ ಆಕ್ರೋಶ ವ್ಯಕ್ತವಾಗಿವೆ.
ಧಾರವಾಡ ರಂಗಾಯಣವು ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಸರ್ಕಾರಗಳು ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತ ಬಂದಿವೆ. ಹೀಗಾಗಿ ಹಲವು ರಂಗ ಪ್ರಯೋಗಗಳು ಯಶಸ್ವಿಯಾಗಿವೆ. ಆದರೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಂಗಾಯಣದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ವಾರ್ಷಿಕ ಸುಮಾರು 1.5 ಕೋಟಿ ರೂಪಾಯಿ ಅನುದಾನ ಪಡೆಯುತ್ತಿದ್ದ ರಂಗಾಯಣಕ್ಕೆ ಪ್ರಸಕ್ತ ಸಾಲಿಗೆ 50 ಲಕ್ಷ ರೂಪಾಯಿ ಅನುದಾನ ದೊರೆತಿದೆ. 1 ಕೋಟಿ ರೂ. ಕೊರತೆ ಮಾಡಲಾಗಿದೆ.
ರಂಗಾಯಣಕ್ಕೆ 12 ಜನ ರೆಪರ್ಟರಿ ಕಲಾವಿದರು, ಮೂವರು ತಂತ್ರಜ್ಞರನ್ನು 3 ವರ್ಷಕ್ಕೊಮ್ಮೆ ನೇಮಿಸಿಕೊಳ್ಳಲಾಗುತ್ತದೆ. ಅಲ್ಲದೆ, ಹೊರಗುತ್ತಿಗೆಯಡಿ ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ನಾಲ್ವರು ಜವಾನರು ಇದ್ದಾರೆ. ಇವರಿಗೆ 12,000 ರೂ. ವೇತನ ನಿಗದಿಯಾಗಿದ್ದು, ಕನಿಷ್ಠ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಂಗಾಯಣ ಸಾಂಸ್ಕೃತಿಕ ಸಮುಚ್ಚಯವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಇದಕ್ಕೆ ಕನಿಷ್ಠ ಬಾಡಿಗೆ ನಿಗದಿಯಾಗಿದ್ದು, ಅದು ನಿರ್ವಹಣೆಗೂ ಸಾಲುತ್ತಿಲ್ಲ.
ಮೈಸೂರು ರಂಗಾಯಣಕ್ಕೆ ಹೋಲಿಸಿದರೆ ಧಾರವಾಡಕ್ಕೆ ನೀಡುವ ಅನುದಾನ ತೀರ ಕನಿಷ್ಠ. ಅನುದಾನ ನೀಡುವಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವಾಗಬಾರದು. ಸರ್ಕಾರ ಎಲ್ಲ ರಂಗಾಯಣಗಳನ್ನು ಸರಿಸಮನಾಗಿ ಕಾಣಬೇಕು ಎಂಬುದು ರಂಗಾಸಕ್ತರ ಒತ್ತಾಸೆಯಾಗಿದೆ.
ರಂಗಭೂಮಿಯ ಹಿರಿಯ ಚೇತನ ಬಿ.ವಿ. ಕಾರಂತರ ಆಶಯದಂತೆ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಮೈಸೂರು ರಂಗಾಯಣವು ಧಾರವಾಡ ಘಟಕವನ್ನು 2006ರಲ್ಲಿ ಆರಂಭಿಸಿತು. ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಚಿದಂಬರರಾವ್ ಜಂಬೆಯವರ ನೇತೃತ್ವದಲ್ಲಿ ರಂಗಕಿಶೋರ ತಂಡದೊಂದಿಗೆ ಧಾರವಾಡ ಘಟಕವನ್ನು ಆರಂಭಿಸಲಾಗಿದೆ. ರಂಗ ಚಟುವಟಿಕೆಗಳ ವಿಸ್ತರಣೆ ಮತ್ತು ಪ್ರಾದೇಶಿಕ ಪರಿಸರಕ್ಕೆ ಅನುಗುಣವಾಗಿ ರಂಗ ಕಲೆಯಲ್ಲಿ ವೃತ್ತಿಪರತೆಯನ್ನು ತರುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ 2011ರಲ್ಲಿ ಧಾರವಾಡ ರಂಗಾಯಣವನ್ನು ಸ್ವಾಯತ್ತ ರಂಗ ಸಂಸ್ಥೆಯನ್ನಾಗಿ ಘೋಷಿಸಿತು. ಮೊದಲ ನಿರ್ದೇಶಕರಾಗಿ ನಟರಾಜ ಏಣಗಿ ಕಾರ್ಯನಿರ್ವಹಿಸಿದ್ದಾರೆ. ರಂಗಾಯಣ ವರ್ಷವಿಡೀ ಚಿಣ್ಣರಮೇಳ, ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ, ಕಾಲೇಜು ವಿದ್ಯಾರ್ಥಿಗಳಿಗಾಗಿ ಯುವರಂಗೋತ್ಸವ, ನವರಾತ್ರಿ ರಂಗೋತ್ಸವ, ರಂಗಧ್ವನಿ, ರಾಷ್ಟ್ರೀಯ ರಂಗಸಂಗೀತ ಕಾರ್ಯುಗಾರ ಮತ್ತು ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದೆ. ರಂಗಾಸಕ್ತರಿಗೆ ಜಿಲ್ಲಾವಾರು ರಂಗ ತರಬೇತಿ ಶಿಬಿರ, ರಂಗಭೂಮಿ ಉಪನ್ಯಾಸ, ಇನ್ನಿತರ ರಂಗಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ರಂಗಾಯಣಕ್ಕೆ ಸರ್ಕಾರ ನೀಡುತ್ತಿರುವ ವಾರ್ಷಿಕ ಅನುದಾನ ಸಾಲದು. ಕನಿಷ್ಠ 2 ಕೋಟಿ ರೂ. ಅನುದಾನ ದೊರೆತರೆ ರಂಗ ಚಟುವಟಿಕೆ ಮತ್ತು ಸಿಬ್ಬಂದಿ ವೇತನಕ್ಕೆ ಅನುಕೂಲವಾಗಲಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ರೆಪರ್ಟರಿ ಕಲಾವಿದರಿಗೆ ಮಾಸಿಕ 20 ಸಾವಿರ ರೂ. ಗೌರವಧನ ನೀಡಿದರೆ ಬೇರೆ ಊರುಗಳಿಂದ ಇಲ್ಲಿಗೆ ಬರುತ್ತಾರೆ. ನಮ್ಮ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ. | ರಾಜು ತಾಳಿಕೋಟಿ, ಧಾರವಾಡ ರಂಗಾಯಣ ನಿರ್ದೇಶಕ