ರಂಗಭೂಮಿಗೆ ಕಲಾಭಿಮಾನಿಗಳ ಕೊರತೆ

6
Published on

ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಕಲಾಭಿಮಾನಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಗಣಪತಿ ಮಿತ್ರಮಂಡಳಿ ಗೌರವಾಧ್ಯಕ್ಷ ಮಹಾಲಿಂಗು ಬೇಸರ ವ್ಯಕ್ತಪಡಿಸಿದರು.

ಗಣಪತಿ ಮಿತ್ರಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಭೂಮಿ ಪಿತಾಮಹರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ಇದೇ ಭವನದಲ್ಲಿ ಒಂದು ನಾಟಕ ಆಯೋಜನೆ ಮಾಡಿದರೆ ಟಿಕೆಟ್‌ಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಪಾವತಿಸಿ ಬ್ಲಾಕ್‌ನಲ್ಲಿ ಟಿಕೆಟ್ ಪಡೆದು ನಾಟಕ ವೀಕ್ಷಿಸುತ್ತಿದ್ದರು. ಆದರೆ, ಇಂದು ಇಡೀ ಭವನವೇ ಖಾಲಿಯಾಗಿರುತ್ತದೆ. ಇಂತಹ ಪರಿಸ್ಥಿತಿಗೆ ಕಲಾವಿದರು ಕಾರಣವೋ ಅಥವಾ ಕಲಾಪ್ರೇಕ್ಷಕರು ಕಾರಣವೋ ಎಂದು ಪರೀಕ್ಷಿಸುವುದು ಕಷ್ಟವೆಂದು ಹೇಳಿದರು.

ರಂಗ ಕಲಾವಿದ ರಾಜೇಶ್ ಪಣಿಯಾರ್ ಮಾತನಾಡಿ, ಇಂದು ನಗರ ಪ್ರದೇಶದಲ್ಲಿ ನಾಟಕ ನೋಡಲು ಜನರು ಬರುವುದೇ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ನಾಟಕದ ಒಲವು ಕಡಿಮೆ ಆಗಿಲ್ಲ. ಇಂದಿಗೂ ಹಳ್ಳಿಯ ಹಬ್ಬದ ಸಂದರ್ಭದಲ್ಲಿ ಕುರುಕ್ಷೇತ್ರ, ಸತ್ಯಹರಿಶ್ಚಂದ್ರ… ಹೀಗೆ ಹಲವಾರು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಆಯೋಜಿಸಲಾಗುತ್ತದೆ. ಕುಟಂಬದ ಎಲ್ಲ ಸದಸ್ಯರು ಕುಳಿತು ನಾಟಕ ವೀಕ್ಷಿಸುವ ಪರಿಪಾಠ ಅಲ್ಲಿ ಜೀವಂತವಾಗಿದೆ ಎಂದು ಹೇಳಿದರು.

ಗಾಯಕ ನಾಗೇಂದ್ರ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ರಂಗಭೂಮಿ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಲ್.ರಂಗಯ್ಯ, ಸಂಗೀತ ನಿದೇರ್ಶಕ ಬಾಲಕೃಷ್ಣ, ಕಲಾವಿದ ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net