ಗ್ರಾಮೀಣ ಜನರಿಗಿಲ್ಲ ತುರ್ತುಸೇವೆ

HOSMARU
ಬಾಗಿಲು ಮುಚ್ಚಿದ ಹೊಸ್ಮಾರಿನ ಪಶು ಚಿಕಿತ್ಸಾಲಯ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಜಾನುವಾರು ಹಾಗೂ ಮನೆಯ ಸಾಕು ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ಉಪಯೋಗಕ್ಕೆ ಬರುತ್ತಿದ್ದ ಪಶು ಚಿಕಿತ್ಸಾಲಯ ಪ್ರಸಕ್ತ ಸರಿಯಾದ ವೈದ್ಯರ ಸೇವೆಯಿಲ್ಲದೆ ಬಾಗಿಲು ಮುಚ್ಚಿದೆ.

ಈದು ಗ್ರಾಪಂ ವ್ಯಾಪ್ತಿಯ ಹೊಸ್ಮಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಪಶು ಚಿಕಿತ್ಸಾಲಯ ವೈದ್ಯರ ಸೇವೆಯಿಲ್ಲದೆ ಗ್ರಾಮದ ಜನ ತೊಂದರೆ ಅನುಭವಿಸುತ್ತಿದ್ದು, ಜಾನುವಾರು ಹಾಗೂ ಸಾಕುಪ್ರಾಣಿಗಳಿಗೆ ಅನಾರೋಗ್ಯ ಸಮಸ್ಯೆ ಕಾಡಿದಾಗ ದೂರದ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ ಸಂಪರ್ಕಿಸುವುದು ಅನಿವಾರ್ಯ.

ಕೇಂದ್ರಕ್ಕೆ ಬೀಗ

ಹೊಸ್ಮಾರಿನಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಈ ಪಶು ಚಿಕಿತ್ಸಾ ಕೇಂದ್ರಕ್ಕೆ ಬೀಗ ಹಾಕಿ ತಿಂಗಳು ಕಳೆದಿದ್ದು ಯಾವಾಗ ಬಾಗಿಲು ತೆರೆದಿರುತ್ತದೆ ಎನ್ನುವುದೇ ಗ್ರಾಮಸ್ಥರಿಗೆ ತಿಳಿದಿಲ್ಲ. ಸಾಕಷ್ಟು ಕೃಷಿಕರು ಹಾಗೂ ಗ್ರಾಮಸ್ಥರು ಇಲ್ಲಿನ ಸೇವೆ ಪಡೆಯಲು ಬರುತ್ತಿದ್ದರೂ ಮುಚ್ಚಿದ ಬಾಗಿಲು ನೋಡಿ ವಾಪಸ್ ಹೋಗುವುದು ಇಲ್ಲಿ ಮಾಮೂಲು. ಹೊಸ್ಮಾರು, ಈದು, ನೂರಲ್‌ಬೆಟ್ಟು ಅತ್ಯಂತ ಗ್ರಾಮೀಣ ಭಾಗವಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಕೃಷಿ ಕುಟುಂಬಗಳಿವೆ. ಪ್ರತಿ ಮನೆಯಲ್ಲೂ ಸಾಕುಪ್ರಾಣಿ ಜಾನುವಾರುಗಳಿವೆ. ಹೀಗಾಗಿ ಗ್ರಾಮದ ಜನರ ಸೇವೆಗೆ ಲಭ್ಯವಾಗಬೇಕಿದ್ದ ಪಶು ಚಿಕಿತ್ಸಾಲಯ ಜನತೆ ಉಪಯೋಗಕ್ಕೆ ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಯ ಸಾಕುಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಕಾಡಿದರೆ ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ನಿದರ್ಶನವೂ ಸಾಕಷ್ಟಿದೆ.

ಕಾಯಂ ವೈದ್ಯರ ನೇಮಕ

ಗ್ರಾಮದ ಹೈನುಗಾರರಿಗೆ ಅವಶ್ಯಕವಾದ ಪಶು ಚಿಕಿತ್ಸಾಲಯಕ್ಕೆ ಕಾಯಂ ವೈದ್ಯರ ನೇಮಕವಾಗಬೇಂದು ಕಳೆದ ಹಲವು ವರ್ಷಗಳಿಂದ ಬೇಡಿಕೆ ಕೇಳಿ ಬರುತ್ತಿದೆ. ಆದರೆ ಇಲ್ಲೀವರೆಗೂ ಜನರ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ಹೈನುಗಾರಿಕೆಯನ್ನ ಮುಖ್ಯ ವೃತ್ತಿಯನ್ನಾಗಿ ಬದುಕು ಕಟ್ಟಿಕೊಂಡ ಕುಟುಂಬಗಳು ಸಾಕಷ್ಟಿದೆ. ಪಶು ವೈದ್ಯರ ಸೇವೆಯಿಲ್ಲದೆ ಗ್ರಾಮದ ಹಲವಾರು ಹೈನುಗಾರರು ಇದೀಗ ಹೈನುಗಾರಿಕೆ ವೃತ್ತಿಯಿಂದ ಹಿಂದೆ ಸರಿಯುವಂತಾಗಿದೆ.

ವೈದ್ಯರು ಯಾವಾಗ ಇರುತ್ತಾರೆ?

ಪಶು ಚಿಕಿತ್ಸಾಲಯಕ್ಕೆ ವಾರದಲ್ಲಿ ಒಂದು ದಿನ ವೈದ್ಯರು ಬಂದು ಸೇವೆ ನೀಡುತ್ತಾರೆ . ಹಾಗಿದ್ದರೂ ಗ್ರಾಮೀಣ ಜನರಿಗೆ ವೈದ್ಯರ ಸೇವೆ ಲಭ್ಯವಾಗುತ್ತಿಲ್ಲ. ಇಲ್ಲಿಗೆ ವೈದ್ಯರು ಯಾವಾಗ ಲಭ್ಯವಿರುತ್ತಾರೆ ಹಾಗೂ ಯಾವಾಗ ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ ಅಥವಾ ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎನ್ನುವ ಯಾವುದೇ ಸೂಚನಾ ಫಲಕ ಕೇಂದ್ರದ ಬಳಿಯಲ್ಲಿಲ್ಲ.

ನಮ್ಮ ಗ್ರಾಮದಲ್ಲಿ ಹೈನುಗಾರರು ಹೆಚ್ಚಿರುವ ಕಾರಣ ಇಲ್ಲಿನ ಪಶು ಚಿಕಿತ್ಸಾಲಯಕ್ಕೆ ಕಾಯಂ ವೈದ್ಯರ ನೇಮಕವಾಗಬೇಕು. ಕಳೆದ ಹಲವು ವರ್ಷಗಳಿಂದಲೂ ಮನವಿ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. -ಜಯಂತ್, ಹೈನುಗಾರರು ಸಾಕು ಪ್ರಾಣಿಹಾಗೂ ಜಾನುವಾರುಗಳಿಗೆ ಅನಾರೋಗ್ಯ ಸಮಸ್ಯೆ ಕಾಡಿದರೆ ಹೈನುಗಾರರು ತೊಂದರೆ ಅನುಭವಿಸುವಂತಾಗಿದೆ. ತುರ್ತು ಸಂದರ್ಭದಲ್ಲಿ ದೂರದ ಕೇಂದ್ರವನ್ನು ಸಂಪರ್ಕಿಸಬೇಕು. -ಸುಂದರ್, ಗ್ರಾಮಸ್ಥರು https://www.vijayavani.net/silver-medal-for-raghavendra-naik https://www.vijayavani.net/purpose-of-culture-earning-education

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net