ರಸ್ತೆ ಅಭಿವೃದ್ಧಿ ಮರೀಚಿಕೆ

Kadambu Road
Published on

ನಿಶಾಂತ್ ಬಿಲ್ಲಂಪದವು ವಿಟ್ಲ

ರಸ್ತೆಗಳೆಲ್ಲವೂ ಅಭಿವೃದ್ಧಿಯಾದರೂ ಕಡಂಬು- ಕಬಕ ರಸ್ತೆಯಲ್ಲಿ ಮಾತ್ರ ಮೂರು ಬಾರಿ ಅಭಿವೃದ್ಧಿ ನಾಟಕ ನಡೆದಿದೆ. ಗುದ್ದಲಿ ಪೂಜೆಯಾಗಿ ಐದು ವರ್ಷ ಕಳೆದರೂ ರಾಜ್ಯ ಹೆದ್ದಾರಿ 101 ಹಳ್ಳ -ಗುಂಡಿಗಳಿಂದಲೇ ಉಳಿದುಕೊಂಡಿದೆ. ವರ್ಷವೂ ಲೋಕೋಪಯೋಗಿ ಇಲಾಖೆ ತೇಪೆ ಹಾಕುತ್ತಿದೆಯೇ ಹೊರತು ರಸ್ತೆ ಮಾತ್ರ ಸಂಪೂರ್ಣ ಅಭಿವೃದ್ಧಿಯಾಗುತ್ತಿಲ್ಲ.

ಸುರತ್ಕಲ್ -ಕಬಕ ರಾಜ್ಯ ಹೆದ್ದಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಬಕ-ಕಡಂಬು ನಡುವಿನ 9.60 ಕಿ.ಮೀ. ದೂರವನ್ನು 4.10 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲು 2016 ಆಗಸ್ಟ್ 2ರಂದು ಗುದ್ದಲಿ ಪೂಜೆ ನಡೆದಿತ್ತು. ರಸ್ತೆಯ ಎರಡೂ ಕಡೆ ಅಗೆದು ಜಲ್ಲಿ ತುಂಬಿಸಿದ್ದು ಬಿಟ್ಟರೆ ಬೇರೇನೂ ಕೆಲಸ ನಡೆದಿಲ್ಲ.

ರಸ್ತೆ ಅವ್ಯವಸ್ಥೆ ಬಗ್ಗೆ ಜನರಿಂದ ದೂರುಗಳು ಕೇಳಿ ಬಂದಾಗ ಎರಡು ಮೂರು ಜೆಸಿಬಿ ಹಾಗೂ ವಿವಿಧ ಯಂತ್ರಗಳು ಆಗಮಿಸಿ ಜಲ್ಲಿಯ ಮೇಲೆ ಬಂದ ಕಳೆಯನ್ನು ತೆಗೆದು ಮತ್ತೆ ಜಲ್ಲಿಯನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗಿದೆ. ಜನರ ಆಕ್ರೋಶ ಕಡಿಮೆಯಾಗುತ್ತಿದ್ದಂತೆ ಒಂದೊಂದೇ ಯಂತ್ರಗಳು ಮಾಯವಾಗುತ್ತ ಹೋಗಿ ರಸ್ತೆ ಕೆಲಸ ಹಾಗೇ ಉಳಿದುಕೊಳ್ಳುತ್ತಿದೆ.

ಪ್ರಕರಣದ ಭಯಕ್ಕೆ ಡಾಂಬರು: ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆಯ ಬಗ್ಗೆ ‘ವಿಜಯವಾಣಿ’ ವರದಿ ಮಾಡಿದ್ದು, ಸ್ಥಳೀಯ ನಿವಾಸಿಗಳು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಹೇಳಿಕೊಂಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತರಾತುರಿಯಲ್ಲಿ ವಿಟ್ಲ ಪೇಟೆಯ ಭಾಗದಲ್ಲಿ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದ ಡಾಂಬರು ಹಾಕಿದ್ದರು.

ಮತ್ತದೇ ಗುತ್ತಿಗೆದಾರರಿಗೆ ಕಾಮಗಾರಿ: ಹಿಂದಿನ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ ಎರಡು ವರ್ಷದಿಂದ ಈ ಪ್ರಕ್ರಿಯೆಗೆ ಯಾವುದೇ ಚಾಲನೆ ಸಿಕ್ಕಿಲ್ಲ. ಈಗ ಮತ್ತೆ ಸರ್ಕಾರ ಅದೇ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಸೂಚಿಸುವ ಸಾಧ್ಯತೆ ಇದೆ ಎಂಬ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

ಬೇರೆಯವರಿಗೆ ಗುತ್ತಿಗೆ ನೀಡುವ ಉದ್ದೇಶದಿಂದ ಇರುವ ಗುತ್ತಿಗೆಯನ್ನು ರದ್ದುಪಡಿಸಲು ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಇನ್ನೂ ಈ ಬಗ್ಗೆ ಸರ್ಕಾರದಿಂದ ಯಾವುದೇ ತೀರ್ಮಾನಗಳು ಬಂದಿಲ್ಲ.
-ಗುರುಪ್ರಸಾದ್
ಸಿ.ಇ., ಎಸ್.ಎಚ್.ಡಿ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net