

ಮೈಸೂರು: ಎಐ ಅರಿವಿನ ಸಾಮರ್ಥ್ಯಗಳನ್ನು ಅನುಕರಿಸಬಹುದಾದರೂ, ಅದರಲ್ಲಿ ಸೃಜನಶೀಲತೆ, ಭಾವನೆಗಳು ಮತ್ತು ನೈತಿಕ ತಾರ್ಕಿಕತೆ ಕೊರತೆಯಿದೆ ಎಂದು ಕೇರಳದ ಮನ್ನಾನಂನ ಕುರಿಯಾಕೋಸ್ ಎಲಿಯಾಸ್ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಫಾದರ್ ಡಾ. ಜೋಸೆಫ್ ವರ್ಗೀಸ್ ಹೇಳಿದರು.
ನಗರದ ಕ್ರೈಸ್ಟ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಬಹುಶಿಸ್ತೀಯ ಎಐ ಕ್ರಾಂತಿಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ ಎಐ ನೈಸರ್ಗಿಕ ಬುದ್ಧಿಮತ್ತೆ ವಿಷಯವಾಗಿ ಅವರು ಮಾತನಾಡಿದರು.
ದಶಕಗಳ ಮಾನವ ನಾವೀನ್ಯತೆಯ ಮೇಲೆ ಎಐ ಪ್ರಗತಿಗಳು ಹೇಗೆ ನಿರ್ಮಿಸಲ್ಪಟ್ಟಿವೆ ಎಂಬುದನ್ನು ಅರಿಯಬೇಕು. ಸಮಾಜದ ಸುಧಾರಣೆಗಾಗಿ ನೈತಿಕ ಮತ್ತು ಜವಾಬ್ದಾರಿಯುತ ಎಐ ಬಳಕೆ ಅಗತ್ಯವನ್ನು ಅರಿಯಬೇಕು. ಎಐ ಮತ್ತು ಮಾನವ ಬುದ್ಧಿಮತ್ತೆ ನಡುವೆ ಮೂಲಭೂತ ವ್ಯತ್ಯಾಸ ಇವೆ. ಎಐ ಅರಿವಿನ ಸಾಮರ್ಥ್ಯಗಳನ್ನು ಅನುಕರಿಸಬಹುದಾದರೂ, ಅದರಲ್ಲಿ ಭಾವನೆಗಳ ಕೊರತೆ ಇದೆ ಎಂದು ಹೇಳಿದರು.
ಮೈಸೂರಿನ ಸಂತ ಥಾಮಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರೆವರೆಂಡ್ ಫಾದರ್ ಡಾ. ಆಗಸ್ಟೀನ್ ಪೈಂಪಲಿ ಅವರು, ಸಮಕಾಲೀನ ಸಮಾಜದಲ್ಲಿ ಡಿಜಿಟಲ್ ತಂತ್ರಜ್ಞಾನ, ಆಳವಾದ ಕಲಿಕೆಯ ಮಾದರಿಗಳು ಮತ್ತು ಅಲ್ಗಾರಿದಮ್‌ಗಳ ದೂರಗಾಮಿ ಪ್ರಭಾವವನ್ನು ತಿಳಿಸಿಕೊಟ್ಟರು.
ಎಐ-ಚಾಲಿತ ರೂಪಾಂತರವು ಕೈಗಾರಿಕೆಗಳು, ಶಿಕ್ಷಣ ಮತ್ತು ದೈನಂದಿನ ಜೀವನವನ್ನು ಹೇಗೆ ಮರು ರೂಪಿಸುತ್ತಿದೆ. ವಿಕಸನಗೊಳ್ಳುತ್ತಿರುವ ತಾಂತ್ರಿಕ ಭೂದೃಶ್ಯವನ್ನು ನ್ಯಾವಿಗೇಟ್ ಮಾಡಲು ಜವಾಬ್ದಾರಿಯುತ ಡಿಜಿಟಲ್ ಕೌಶಲಗಳನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ, ಕರ್ನಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ, ಹುಲ್ಲಹಳ್ಳಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಬಿಂದುಲತಾ, ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀತಾ ಪಟೇಲ್, ಮಹಾರಾಜ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಲ್ಯಾನ್ಸಿ ಡಿ. ಸೋಜಾ ಎಐ ಬಳಕೆ ಕುರಿತ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಫಾದರ್ ಜಿಂಟೋ ಜೋಸ್, ಸಮ್ಮೇಳನದ ಸಂಯೋಜಕ ಡಬ್ಲ್ಯೂ.ಎಸ್.ಜಾನ್ಸನ್ ಇತರರು ಇದ್ದರು. ನಾನಾ ಭಾಗದಿಂದ ಬಿಎ, ಬಿಕಾಂ, ಬಿಬಿಎ ಮತ್ತು ಬಿಸಿಎ ವಿಭಾಗದ 50 ಕ್ಕೂ ಹೆಚ್ಚು ಭಾಗವಹಿಸಿ ಸಂಶೋಧನಾ ಪ್ರಬಂಧ ಮಂಡಿಸಿದರು.