ಬೆಂಗಳೂರು ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಮನ್ವಯತೆ ಕೊರತೆ: ನರೇಶ್ ನರಸಿಂಹನ್ ಟೀಕೆ

sushasana
Published on

ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ, ಬಿಡಿಎ, ಬಿಎಂಟಿಸಿ ಸೇರಿ ನಗರದಲ್ಲಿ ವಿವಿಧ 7 ಸ್ಥಳಿಯ ಸಂಸ್ಥೆಗಳಿದ್ದು, ಒಂದಕ್ಕೊಂದು ಸಮನ್ವಯತೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿವೆ. ಅವೈಜ್ಞಾನಿಕ ್ಲೈಓವರ್‌ಗಳು, ಸಾರಿಗೆ ನಿಯಮಗಳು, ರಾಜಕಾಲುವೆಗಳನ್ನು ಅವೈಜ್ಞಾಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಾರಿಗೆ ತಜ್ಞ ನರೇಶ್ ನರಸಿಂಹನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸುಶಾಸನ ದಿನಾಚರಣೆಯಲ್ಲಿ ‘ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯ ಲೋಗೋ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸುಸ್ಥಿರ ನಗರಾಭಿವೃದ್ಧಿ ಹಾಗೂ ಏಕೀಕೃತ ಸಾರ್ವಜನಿಕ ಸೇವೆ’ ಕುರಿತು ಮಾತನಾಡಿದ ಅವರು, ನಗರಕ್ಕೆ ಯೋಜನೆ ರೂಪಿಸುವ ವಿಚಾರದಲ್ಲಿ 2015ರ ಮಾಸ್ಟರ್ ಪ್ಲ್ಯಾನ್ ಅನ್ನೇ ವಿಸ್ತರಿಸುತ್ತಿದ್ದಾರೆಯೇ ವಿನಾ ಹೊಸ ಯೋಜನೆ ರೂಪಿಸುತ್ತಿಲ್ಲ. ಕಳೆದ 10-15 ವರ್ಷದಲ್ಲಿ ನಗರದ ಅಭಿವೃದ್ಧಿ ಮತ್ತು ಜನಸಂಖ್ಯೆ ಸಾಕಷ್ಟು ಬದಲಾಗಿದೆ. 2011ರಲ್ಲಿ ಬೆಂಗಳೂರಿನ ಜನಸಂಖ್ಯೆ 1.12 ಕೋಟಿ ಇತ್ತು. ಆದರೆ, ಈಗ 1.4 ಕೋಟಿ ಜನಸಂಖ್ಯೆ ಇದೆ ಎಂದರು.

ನಗರದ ಜನಸಂಖ್ಯೆಯಲ್ಲಿ ಶೇ.4.5 ಮಂದಿ ಕಾರು ಬಳಸುತ್ತಾರೆ. ಶೇ.10ಕ್ಕೂ ಕಡಿಮೆ ಜನ ಮೆಟ್ರೋ ರೈಲು ಬಳಸುತ್ತಾರೆ. ಲಂಡನ್‌ನಲ್ಲಿ ಶೇ.65ಕ್ಕೂ ಹೆಚ್ಚಿನ ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಆದರೆ, ನಮ್ಮಲ್ಲಿ 1.4 ಕೊಟಿ ಜನರಿಗೆ ಕೇವಲ 6,500 ಸರ್ಕಾರಿ ಬಸ್ಸುಗಳಿವೆ. ಈ ವಿಚಾರದಲ್ಲಿ ಸುಧಾರಣೆಯಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಿಕ್ಷಣ ಪ್ರತಿಷ್ಠಾನ ಸಿಇಒ ಪ್ರಸನ್ನ ವಿ.ಆರ್., ಬುಲ್ ಪೋರ್ಸ್ ಮತ್ತು ವರ್ಚುಯಲ್ ಟೆಕ್ ಹೆಲ್ತ್ ಕ್ಲಿನಿಕ್ ಸಹ ಸಂಸ್ಥಾಪಕ ಡಾ. ಸುಬ್ರಮಣ್ಯ ಬಸವನಹಳ್ಳಿ, ಇನ್ಫೋ ಸಿಸ್ಟಮ್ಸ್ ನಿರ್ದೇಶಕ ಮಧು ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ 7ನೇ ತರಗತಿಯ ಶೇ.60 ವಿದ್ಯಾರ್ಥಿಗಳಿಗೆ 2ನೇ ತರಗತಿಯ ಪಾಠಗಳನ್ನು ಸರಿಯಾಗಿ ಓದಲು ಬರುತ್ತಿಲ್ಲ. ಶಿಕ್ಷಣ ಕ್ಷೇತ್ರದ ಸುಧಾರಣೆ ಕಾಗದಲ್ಲಿಯೇ ಉಳಿದಿದೆ. ಉನ್ನತ ಶಿಕ್ಷಣದಲ್ಲಿ ಎನ್‌ಇಪಿಯನ್ನು ದೇಶದಲ್ಲಿಯೇ ಮಾದರಿಯಾಗಿ ಅನುಷ್ಠಾನ ಮಾಡಲಾಯಿತು. ಅದು ಪ್ರಾಥಮಿಕ ಶಿಕ್ಷಣದಲ್ಲಿ ಸಾಧ್ಯವಾಗಿಲ್ಲ. - ಪ್ರಸನ್ನ ವಿ.ಆರ್. ಶಿಕ್ಷಣ ಪ್ರತಿಷ್ಠಾನ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net