

ಬೆಂಗಳೂರು ಗ್ರಾಮಾಂತರ : ಜಿಲ್ಲಾಡಳಿತ ಭವನದಲ್ಲಿ ಕರೊನಾ ನಿಯಮ ಪಾಲನೆ ನೇಪಥ್ಯಕ್ಕೆ ಸರಿದಿದೆ. ಸಭೆ ಸಮಾರಂಭ, ಪ್ರತಿಭಟನೆ, ಧರಣಿಗಳಲ್ಲಿ ನಿಯಮ ಪಾಲನೆಗೆ ಕಿಮ್ಮತ್ತಿಲ್ಲದಂತಾಗಿದೆ. ಅಧಿಕಾರ ವರ್ಗವೇ ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಜಿಲ್ಲಾಡಳಿತ ಭವನದಲ್ಲಿ ಕಂಡು ಬರುತ್ತಿದೆ.
ವಾರಗಟ್ಟಲೆ ಸೀಲ್‌ಡೌನ್ ಆಗಿದ್ದ ಜಿಲ್ಲಾಡಳಿತ ಭವನ ಆರಂಭ ಶೂರತ್ವಕ್ಕೆ ಮಾತ್ರ ಕೈಗನ್ನಡಿ ಎನಿಸಿತ್ತು. ಆರಂಭದಲ್ಲಿ ಜಿಲ್ಲಾಡಳಿತ ಭವನದ ಪ್ರತಿ ಇಲಾಖೆಗಳ ಪ್ರವೇಶ ದ್ವಾರದಲ್ಲಿ ಕಂಡುಬರುತ್ತಿದ್ದ ಸ್ಯಾನಿಟೈಸರ್ ವ್ಯವಸ್ಥೆ ಈಗ ಕಣ್ಮರೆಯಾಗಿದೆ, ಪರಸ್ಪರ ಅಂತರ, ಮಾಸ್ಕ್ ಧರಿಸುವ ನಿಯಮ ಮರೆತು ಎಷ್ಟೋ ದಿನಗಳಾಗಿವೆ. ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿರುವುದನ್ನು ಹೊರತುಪಡಿಸಿದರೆ ಭಾಗಶಃ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ.
ಅಧಿಕಾರ ವರ್ಗವೇ ನಿರ್ಲಕ್ಷ್ಯ ವಹಿಸಿದರೆ ಇನ್ನು ಸಾರ್ವಜನಿಕರನ್ನು ಪ್ರಶ್ನಿಸುವವರಾರು ಎಂಬ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುವ ಸಾರ್ವಜನಿಕರನ್ನು ಬೇಟೆಯಾಡಿ ದಂಡ ವಸೂಲಿ ಮಾಡುವ ಜಿಲ್ಲಾಡಳಿತ ಕಾರ್ಯ ಸ್ಥಾನದಲ್ಲೇ ಕರೊನಾ ನಿಯಮ ಪಾಲನೆಯಾಗದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಚ್ಛತೆ ಉತ್ಸವ ನಗೆಪಾಟಲು: ಜಿಲ್ಲಾ ವ್ಯಾಪ್ತಿಯಲ್ಲಿ ಸ್ವಚ್ಛೋತ್ಸವ -ನಿತ್ಸೋತ್ಸವ ಹೆಸರಿನಡಿ ಸ್ವಚ್ಛತೆ ಪಾಠ ಮಾಡಲು ಹೊರಟಿರುವ ಜಿಪಂ ಕೂಡ ಕಚೇರಿ ಆವರಣದಲ್ಲಿ ಸ್ವಚ್ಛತೆಗೆ ಒತ್ತು ನೀಡುತ್ತಿಲ್ಲ. ಜಿಪಂ ಸಭೆ ಸಮಾರಂಭದ ನೆಪದಲ್ಲಿ ಊಟ ಉಪಚಾರದ ವ್ಯವಸ್ಥೆ ಮಾಡುವ ಜಿಪಂ ಊಟ, ಉಪಾಹಾರದ ಬಳಿಕ ಬಳಸಿ ಬಿಸಾಡಿದ ತಟ್ಟೆ, ಲೋಟ ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ವಿಲೇವಾರಿ ಮಾಡುತ್ತಿದೆ. ದುರಂತವೆಂದರೆ ಇಂಥ ತ್ಯಾಜ್ಯವನ್ನು ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಲ್ಲೇ ವಿಲೇವಾರಿ ಮಾಡುತ್ತಿರುವುದು ಮುಖ್ಯ ರಸ್ತೆಯಲ್ಲಿ ಹಾದುಹೋಗುವ ಸಾವಿರಾರು ಸಾರ್ವಜನಿಕರ ಅಪಹಾಸ್ಯಕ್ಕೆ ಕಾರಣವಾಗಿದೆ.
ಅಧ್ಯಕ್ಷರ ಚುನಾವಣೆಯಲ್ಲಿ ಹರೋಹರ : ಶುಕ್ರವಾರ (ನ.20) ಜಿಪಂ ಚುನಾವಣೆ ವೇಳೆ ಸೂಲಿಬೆಲೆ ಸೇರಿ ಜಿಲ್ಲೆಯ ಬಹುತೇಕ ಕ್ಷೇತ್ರಗಳ ಕಾರ್ಯಕರ್ತರು, ಅಭಿಮಾನಿಗಳು ಜಿಲ್ಲಾಡಳಿತ ಭವನದಲ್ಲಿ ಜಮಾಯಿಸಿದ್ದರು. ಅಧ್ಯಕ್ಷರ ಆಯ್ಕೆ ಸಂಭ್ರಮದಲ್ಲಿದ್ದ ಬಹುತೇಕರು ಕರೊನಾ ನಿಯಮ ಪಾಲನೆ ಕಡೆಗಣಿಸಿದ್ದರು. ಶಾಸಕರಾದಿಯಾಗಿ ಜಿಪಂ ಸದಸ್ಯರಿಂದ ಹಿಡಿದು ಮುಖಂಡರು ಅಧಿಕಾರಿ ವರ್ಗವೂ ಕರೊನಾ ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಅಧ್ಯಕ್ಷರ ಅಭಿನಂದನೆ ವೇಳೆ ಸಾವಿರಾರು ಜನ ಜಮಾಯಿಸಿದ್ದು ಕರೊನಾ ನಿಯಮಕ್ಕೆ ಕಿಮ್ಮತ್ತಿಲ್ಲದಂತಾಗಿತ್ತು. ಪ್ರತಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆ ಧರಣಿಯಂಥ ಕಾರ್ಯಕ್ರಮ ನಡೆಯುವ ಶಕ್ತಿ ಕೇಂದ್ರದಲ್ಲಿ ಕರೊನಾ ನಿಯಮ ಉಲ್ಲಂಘನೆ, ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತಿದೆ.
ಜಿಲ್ಲಾಡಳಿತ ಭವನದ ದ್ವಾರದಲ್ಲೆ ತ್ಯಾಜ್ಯ ವಿಲೇವಾರಿ ಮಾಡಿರುವುದು ಅಕ್ಷ್ಯಮ್ಯ. ತ್ಯಾಜ್ಯ ವಿಲೇವಾರಿಗೆ ಸಿಬ್ಬಂದಿ ನೇಮಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಪುನರಾವರ್ತನೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಗೋವಿಂದರಾಜು, ಯೋಜನಾ ನಿರ್ದೇಶಕ, ಸ್ವಚ್ಛಭಾರತ ಮಿಷನ್