ಹೆಚ್ಚಿನ ಸಾರಿಗೆ ಸೌಕರ್ಯಕ್ಕೆ ಒತ್ತಾಯ

mkg1a
Published on

ಬಸವಾಪಟ್ಟಣ: ಸಮೀಪದ ಕೆರೆಬಿಳಚಿ ಸುತ್ತಲಿನ ಗ್ರಾಮಗಳಿಂದ ನಿತ್ಯ ವಿದ್ಯಾರ್ಥಿಗಳು ದಾವಣಗೆರೆ ಕಾಲೇಜಿಗೆ ತೆರಳಲು ಬಸ್‌ಗಳ ಕೊರತೆಯಿದ್ದು, ಈ ಮಾರ್ಗದಲ್ಲಿ ಹೆಚ್ಚಿನ ಬಸ್ ಸಂಚಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಿತ್ಯ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ಕೆರೆಬಿಳಚಿ ಗ್ರಾಮದಿಂದ ಪ್ರತಿದಿನ ಬೆಳಗ್ಗೆ 7:20ಕ್ಕೆ ದಾವಣಗೆರೆಗೆ ಹೊರಡುವ ಬಸ್ ಕಬ್ಬಳ -ದೊಡ್ಡಘಟ್ಟ- ತ್ಯಾವಣಿಗೆ- ಅರೇಹಳ್ಳಿ- ಕದರನಹಳ್ಳಿ-ಮತ್ತಿ- ಗೋಣಿವಾಡ -ಕಾರಿಗನೂರು ಕ್ರಾಸ್ -ಕುಕ್ಕುವಾಡ - ಕೈದಾಳ್ ಕ್ರಾಸ್- ಹದಡಿ- 6ನೇ ಕಲ್ಲು ಗ್ರಾಮಗಳ ಮೂಲಕ ತೆರಳುತ್ತದೆ.

100ರಿಂದ 150ಕ್ಕೂ ಹೆಚ್ಚು ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳು ಈ ಬಸ್‌ನಲ್ಲಿಯೇ ದಾವಣಗೆರೆಗೆ ಸಂಚಾರ ಮಾಡುವ ದುಸ್ಥಿತಿ ಇದೆ. ಆದರೆ, ಈ ಬಸ್‌ಗೆ ಕೆರೆಬಿಳಿಚಿ ಗ್ರಾಮದಲ್ಲೇ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವುದರಿಂದ ಮುಂದೆ ಕಬ್ಬಳ, ದೊಡ್ಡಘಟ್ಟ, ತ್ಯಾವಣಿಗೆ, ಮತ್ತಿ ಗ್ರಾಮಕ್ಕೆ ಬಸ್ ಫುಲ್ ಆಗುತ್ತದೆ.

ಹೀಗಾಗಿ, ಬಸ್ ಪಾಸ್ ಇದ್ದರೂ ವಿದ್ಯಾರ್ಥಿಗಳು ಹಣಕೊಟ್ಟು ಖಾಸಗಿ ಬಸ್‌ಗಳಲ್ಲಿ ತೆರಳುವಂತಾಗಿದೆ. ಜತೆಗೆ, ಶಕ್ತಿ ಯೋಜನೆ ಆರಂಭವಾಗಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ.

ಕೂಡಲೇ ಹೆಚ್ಚಿನ ಬಸ್‌ಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ದೊಡ್ಡಘಟ್ಟ ಹಾಗೂ ಕೆರೆಬಿಳಚಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ರಂಗಸ್ವಾಮಿ ಎಸ್., ಹೈದರ್‌ಅಲಿ ಖಾನ್ ಮತ್ತಿತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net