

ಹೊಸಕೋಟೆ: ಕರೊನಾದಂತ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ರಕ್ತದಾನ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇಂಥ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಕಾರ್ಯ ಕರ್ತರು ಹಾಗೂ ಬಿಜೆಪಿ ಮುಖಂಡರು ಸ್ವಯಂ ಪ್ರೇರಣೆಯಿಂದ ರಕ್ರದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ ವಿಷಯ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಬಿಜೆಪಿ ಯುವ ಮೋರ್ಚಾ ಹೊಸಕೋಟೆ ಮಂಡಲ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಯೋಧರ ನೆನಪಿನಾರ್ಥ ಶನಿವಾರ ಹೊಸಕೋಟೆ ಕನಕಭವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಕರೊನಾ ಸಂದರ್ಭದಲ್ಲಿ ರಕ್ತ ಸಿಗುವುದು ಕಷ್ಟಸಾಧ್ಯ ಎನ್ನುವಂತ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಆರೋಗ್ಯವಂತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸುವ ಪುಣ್ಯ ಕಾರ್ಯ ಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲು ರಕ್ತದ ಕೊರತೆ ಕಂಡು ಬಂದಿದ್ದು, ರೋಗಿಗಳ ಜೀವ ಉಳಿಸಲು ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ನಗರ ಬಿಜೆಪಿ ಅಧ್ಯಕ್ಷ ಸಿ.ಜಯರಾಜ್ ಮಾತನಾಡಿ, ನಿರೀಕ್ಷೆಗೂ ಮೀರಿ ರಕ್ತದಾನ ಮಾಡಲು ದಾನಿಗಳು ಮುಂದೆ ಬಂದಿದ್ದು, 603 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಜಯರಾಜ್,ತಾಲೂಕು ಘಟಕದ ಅಧ್ಯಕ್ಷ ಸತೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿನೋದ್, ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ಸಂಪತ್, ತಾಲೂಕು ಅಧ್ಯಕ್ಷ ರಾಮು ಹಾಗೂ ಎಲ್ಲ ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.