ಗ್ರಾಮೀಣ ಪ್ರದೇಶದಲ್ಲಿ ಸಂವಿಧಾನ ಜಾಗೃತಿ ಕೊರತೆ

27 Dwd 6 vvs prasad
Published on

ಧಾರವಾಡ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಉನ್ನತ ಆಶಯಗಳೊಂದಿಗೆ ಭಾರತಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಆದರೆ, ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ, ಪರಿಪೂರ್ಣವಾಗಿ ಆಚರಣೆಗೆ ತರುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಸ್ವರ್ಣ ಗ್ರುಪ್ ಆಫ್ ಕಂಪನಿ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಪ್ರಭುದ್ಧ ಭಾರತ ಫೌಂಡೇಷನ್, ಡಾ. ಬಾಬಾಸಾಹೇಬ ಅಂಬೇಡ್ಕರ್ ಅಭಿವೃದ್ಧಿ ಅಕಾಡೆಮಿ ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಾಂಸ್ಕೃತಿಕ ಅಭಿವೃದ್ಧಿ ವೇದಿಕೆಯಿಂದ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಸಮಾರೋಪದಲ್ಲಿ ಅವರು ಮಾತನಾಡಿದರು.

ದೇಶ ಸಂವಿಧಾನ ಅಂಗೀಕರಿಸಿ 75 ವರ್ಷಗಳು ಗತಿಸಿವೆ. ನೆಲ- ಜಲ, ಜನ, ಭಾಷೆ, ಆಚಾರ- ವಿಚಾರ, ಲಿಂಗತ್ವ ಎಲ್ಲವನ್ನು ಒಳನ್ನೊಳಗೊಂಡಿರುವ ಪ್ರಪಂಚದಲ್ಲೇ ಶ್ರೇಷ್ಠತೆ ಸಂವಿಧಾನವನ್ನು ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಆದರೆ, ಸಂವಿಧಾನದ ಬಗ್ಗೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಇಲ್ಲದಂತಾಗಿದೆ. ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಆ ಸಮುದಾಯಕ್ಕೂ ಸಂವಿಧಾನದ ಬಗ್ಗೆ ಹೆಚ್ಚಿನ ಜ್ಞಾನ ನೀಡುವಲ್ಲಿ ಎಡವಿದ್ದೇವೆ. ಸಂವಿಧಾನದ ಬಗ್ಗೆ ಶೇ. 35ರಷ್ಟು ಜನರಿಗೆ ಮಾತ್ರ ಅರಿವು ಇದ್ದು, ಉಳಿದವರಿಗೆ ಜಾಗೃತಿ ಇಲ್ಲ ಎಂದರು. ಸಂವಿಧಾನದ ಬಗ್ಗೆ ತಿಳಿಸಿಕೊಡಬೇಕಾದ ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬದಲಿಸುವ ಮೂಲಕ ಮೂಲ ಆಶಯಕ್ಕೆ ಧಕ್ಕೆ ತರುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ದೇಶದ ದುರಂತ. ಇನ್ನಾದರೂ ಸಂವಿಧಾನದ ಆಶಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರಜ್ಞಾವಂತರು ಮಾಡಬೇಕು ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net