ಪ್ರೀತಿ ಪ್ರೇಮ ಬಾಂಧವ್ಯದ ಕೊರತೆ, ನಶಿಸಿಹೋಗುತ್ತಿರುವ ಕುಟುಂಬಗಳು: ಮಾಜಿ ಸಿಎಂ ಸದಾನಂದಗೌಡ ಬೇಸರ

IMG_20250911_235607.jpg
Published on

ಚಿಕ್ಕಬಳ್ಳಾಪುರ: ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರಗಳು ಉತ್ತಮ ಸಮಾಜದ ನಾಲ್ಕು ಆಧಾರಸ್ತಂಭಗಳು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಗುರುವಾರ ಕೈಗೊಂಡಿದ್ದ  'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 27ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕೇವಲ ಹಣ ಗಳಿಕೆಯು, ಹೆಸರಿಗೆ ಸ್ಥಾನಮಾನಗಳನ್ನು ಗಿಟ್ಟಿಸಿಕೊಳ್ಳುವುದೇ ಸಮಾಜವಲ್ಲ. ಪ್ರೀತಿ ಎನ್ನುವುದು ಅದ್ಭುತವಾದ ಶಬ್ದ. ಇದನ್ನು ದುಡ್ಡಿನಲ್ಲಿ ಖರೀದಿಸಲು ಸಾಧ್ಯವಿಲ್ಲ. ಇದು ಹೃದಯದಲ್ಲಿನ ಭಾವನಾತ್ಮಕ ಸ್ವಯಂ ಸೃಷ್ಟಿ ಎಂದು ತಿಳಿಸಿದರು. 
ಇತ್ತೀಚಿಗಿನ ದಿನಗಳಲ್ಲಿ ಪ್ರೀತಿ ಪ್ರೇಮ ಬಾಂಧವ್ಯ ಕೊರತೆಯಿಂದ ಇಡೀ ಕುಟುಂಬವೇ ನಶಿಸಿ ಹೋಗುತ್ತಿರುವುದನ್ನು ಕಾಣಲಾಗುತ್ತಿದೆ. ಸಾಮಾಜಿಕ ಬದುಕಿನಲ್ಲಿ ಪ್ರೀತಿ ಎನ್ನುವಂತಹುದು ಎಲ್ಲವನ್ನು ಒಂದಗೂಡಿಸುತ್ತದೆ. ಇದಕ್ಕೆ ಪ್ರೀತಿಯ ಜತೆಗೆ ನಂಬಿಕೆ, ವಿಶ್ವಾಸ ಇರಬೇಕು ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ ಸಿ.ಎನ್‌. ಅಶ್ವತ್ಥ ನಾರಾಯಣ, ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತಿತರರು ಇದ್ದರು.‌

*ಪ್ರಶಸ್ತಿ ಸ್ವೀಕಾರ
'ಈಚ್ ಒನ್ ಎಜುಕೇಟ್ ಒನ್ ಪೌಂಡೇಷನ್' ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಎಪ್ಸನ್ ಕಂಪನಿ ಪರವಾಗಿ ಪೂರೈಕೆ ಸರಪಳಿ ನಿರ್ವಹಣೆಯ ನಿರ್ದೇಶಕ ವೆಂಕಟೇಶ್ ರಾಜು, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಜೇಂದ್ರ ಕುಮಾರ್ ಸಿಂಗ್ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ, ಜಪಾನ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಥೈಸೆ ಕುರಿನೊಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ' ಪುರಸ್ಕಾರ ನೀಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net