ಆಧಾರ್‌ಗಿಲ್ಲ ತಿದ್ದುಪಡಿ, ಗ್ಯಾರಂಟಿಗೆ ಹಿನ್ನಡೆ

gokarna aadhar
Published on

ಶ್ರೀಧರ ಅಡಿ ಗೋಕರ್ಣ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ತಮ್ಮ ಹೆಸರು ನೋಂದಾಯಿಸಲು ಜನ ಇನ್ನಿಲ್ಲದ ತರಾತುರಿಯಲ್ಲಿದ್ದಾರೆ. ಇದಕ್ಕೆ ಅವಕಾಶ ಒದಗಿಸುತ್ತಿರುವ ಸರ್ಕಾರಿ ಕಚೇರಿ, ಅಂಚೆ ಕಚೇರಿ, ಗ್ರಾಮ ಒನ್ ಮತ್ತು ಗ್ರಾಹಕ ಸೇವಾ ಕೇಂದ್ರಗಳ(ಸಿಎಸ್‌ಸಿ) ಮುಂದೆ ಜನರ ಉದ್ದುದ್ದ ಸಾಲು ಕಾಣುತ್ತಿದೆ. ಆದರೆ ಗೋಕರ್ಣದಲ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಇಲ್ಲಿ ನೋಂದಣಿ ಸೆಂಟರ್‌ಗಳು ಜನರಿಲ್ಲದೆ ಖಾಲಿಯಾಗಿವೆ. ಹೀಗಾಗಿ, ಗ್ಯಾರಂಟಿ ಯೋಜನೆಗಳ ನೋಂದಣಿ ಕುಂಠಿತವಾಗಿದೆ.
ಗೋಕರ್ಣ ಸೇರಿ ಹತ್ತಿರದ ನಾಡುಮಾಸ್ಕೇರಿ, ಹನೇಹಳ್ಳಿ, ತೊರ್ಕೆ, ಹಿರೇಗುತ್ತಿ ಮುಂತಾದ ಗ್ರಾಮ ಪಂಚಾಯಿತಿಯ 50 ಸಾವಿರಕ್ಕೂ ಹೆಚ್ಚಿನ ಗ್ರಾಮಸ್ಥರು ಗ್ಯಾರಂಟಿ ಯೋಜನೆಗಳಿಗೆ ಹೆಸರು ನೋಂದಾಯಿಸಲು ಗೋಕರ್ಣವನ್ನೇ ಅವಲಂಬಿಸಿದ್ದಾರೆ. ಸಾರ್ವಜನಿಕರಿಗೆ ಇಂತಹ ನೆರವು ಒದಗಿಸುವ 4 ಖಾಸಗಿ ಕೇಂದ್ರಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ 3 ಗ್ರಾಮ ಒನ್ ಮತ್ತು 1 ಗ್ರಾಹಕ ಸೇವಾ ಕೇಂದ್ರವಾಗಿದೆ. ಈ ಹಿಂದೆ ಇದೇ ಕಾರ್ಯ ಮಾಡಿಕೊಡುತ್ತಿದ್ದ ಇಲ್ಲಿನ ನೆಮ್ಮದಿ ಕೇಂದ್ರ ಕಳೆದ ಮೂರ್ನಾಲ್ಕು ವರ್ಷದಿಂದ ಸರ್ವರ್ ಹಾಳಾದ ನೆಪ ಒಡ್ಡಿ ಈ ಸಹಾಯವನ್ನು ನಿಲ್ಲಿಸಿದೆ. ಇದೇ ರೀತಿ ಇಲ್ಲಿನ ಅಂಚೆ ಕಚೇರಿಯಲ್ಲೂ ನೀಡಲಾಗುತ್ತಿದ್ದ ಈ ಸೇವೆ ನಿಲ್ಲಿಸಲಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಅತ್ಯಂತ ಅವಶ್ಯಕ ಪ್ರಕ್ರಿಯೆಯಾಗಿದೆ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್ ದಾಖಲಾಗಿದ್ದರೆ ಮಾತ್ರ ಯೋಜನೆಯೊಂದಿಗೆ ಸೇರಿಕೊಳ್ಳಲು ಸಾಧ್ಯ. ಮೊಬೈಲ್ ನಂಬರ್‌ಗೆ ಬರುವ ಒಟಿಪಿಯ ಸಹಾಯದಿಂದ ಮಾತ್ರ ಫಲಾನುಭವಿಗಳಾಗುವ ಅವಕಾಶವಿದೆ. ಆದರೆ, ಕಳೆದ ವಿಧಾನ ಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಈ ಎಲ್ಲ ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌ಗೆ ಮಾಡಲಾಗುತ್ತಿದ್ದ ಎಲ್ಲ ಬಗೆಯ ತಿದ್ದುಪಡಿಗಳನ್ನು ನಿಷೇಧಿಸಲಾಗಿತ್ತು. ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರ ಪಡೆದ ನಂತರ ಸರ್ಕಾರಿ ಕಚೇರಿಗಳಲ್ಲಿ, ಕೆಲವು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗಳಲ್ಲಿ ಆಧಾರ್ ಕೆಲಸಕ್ಕೆ ಅವಕಾಶ ನೀಡಲಾಯಿತು. ಆದರೆ, ಖಾಸಗಿ ಸೆಂಟರ್‌ಗಳಿಗೆ ಆಧಾರ್ ಕಾರ್ಡ್‌ನ ಎಲ್ಲ ಪ್ರಕಾರದ ತಿದ್ದುಪಡಿಗೆ ಹಿಂದೆ ಇದ್ದ ಅವಕಾಶಗಳಿಗೆ ಮತ್ತೆ ಒಪ್ಪಿಗೆ ನೀಡದೆ ಅವುಗಳನ್ನು ಅತಂತ್ರ ಸ್ಥಿತಿಗೆ ಒಡ್ಡಲಾಯಿತು. ಖಾಸಗಿ ಕೇಂದ್ರಗಳಲ್ಲಿ ಮಾತ್ರ ಆಧಾರ್ ತಿದ್ದುಪಡಿ ಮತ್ತು ಜೋಡಣೆ ಅವಕಾಶ ಪಡೆದಿದ್ದ ಗೋಕರ್ಣ ಸುತ್ತಲಿನ ಗ್ರಾಮಸ್ಥರು ಇದರಿಂದ ಗ್ಯಾರಂಟಿ ಯೋಜನೆಯಿಂದ ದೂರಾಗುವ ಆತಂಕವನ್ನು ಈಗ ಎದುರಿಸುವಂತಾಯಿತು.
ದಾಖಲಾಗಿಲ್ಲ ಮೊಬೈಲ್ ನಂಬರ್: ಇಲ್ಲಿನ ಗ್ರಾಮಾಂತರದ ಗರಿಷ್ಠ ಜನ ರೈತಾಪಿ, ಕೂಲಿ-ನಾಲಿ ಮತ್ತು ಚಿಕ್ಕ ಪುಟ್ಟ ವ್ಯವಸಾಯದಿಂದ ಬದುಕುವ ಕಡು ಬಡವರು. ಇಂತವರ ಬಳಿ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಇರುವುದೇ ದುರ್ಲಭ. ಹಾಗೂ ಹೀಗೂ ಆಧಾರ್ ಕಾರ್ಡ್ ಪಡೆದುಕೊಂಡಿರುವ ಹೆಚ್ಚಿನವರ ಮೊಬೈಲ್ ನಂಬರ್ ಅದರಲ್ಲಿ ನಮೂದಾಗಿಲ್ಲ. ಇದರ ಜತೆಗೆ ಆಧಾರ್‌ಗೆ ಕಾನೂನಾತ್ಮಕವಾಗಿ ಆಗಾಗ ಆಗಬೇಕಾದ ಕೆಲವು ತಿದ್ದುಪಡಿಯನ್ನೂ ಮಾಡಬೇಕಾದ ಅವಶ್ಯಕತೆಗಳನ್ನು ಕೆಲವರು ಎದುರಿಸುತ್ತಿದ್ದಾರೆ. ಆದರೆ, ಆಧಾರ್ ಕಾರ್ಡ್‌ನ ಎಲ್ಲ ನಮೂನೆಯ ತಿದ್ದುಪಡಿ ಮತ್ತು ಜೋಡಣೆಗೆ ಬ್ರೇಕ್ ಬಿದ್ದಿರುವುದರಿಂದ ಇಲ್ಲಿನ ನೂರಾರು ಗ್ರಾಮಸ್ಥರು ನಿತ್ಯ ದೂರದ ಕುಮಟಾ ಅಥವಾ ಅಂಕೋಲಾಕ್ಕೆ ಅಲೆಯುತ್ತಿದ್ದಾರೆ. ಅಲ್ಲಿಯೂ ನಿಯಮಿತವಾದ ಕೇಂದ್ರಗಳಲ್ಲಷ್ಟೇ ಈ ಕೆಲಸ ಮಾಡಲಾಗುತ್ತಿರುವುದರಿಂದ ಮತ್ತು ಅತೀವ ಜನರ ಒತ್ತಡದಿಂದಾಗಿ ಟೋಕನ್ ಪದ್ಧತಿ ಜಾರಿಗೊಳಿಸಲಾಗುವುದರಿಂದ ಗೋಕರ್ಣ ಭಾಗದ ಜನರು ವಾರಗಟ್ಟಲೇ ಕಾಯುವ ಮತ್ತು ಅಲ್ಲಿಂದಿಲ್ಲಿಗೆ ಅಲೆಯುವ ದುಸ್ಥಿತಿಗೆ ತುತ್ತಾಗಿದ್ದಾರೆ.
ಈ ಕುರಿತಾಗಿ ಇಂತಹ ಕೇಂದ್ರಗಳಿಗೆ ಇತ್ತೀಚೆಗೆ ಭೇಟಿಯಿತ್ತು ಕೆಲಸವನ್ನು ಪರಿಶೀಲಿಸಿದ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಅವರಿಗೆ ಇಲ್ಲಿನ ತೊಂದರೆ ಪರಿಹಾರಕ್ಕೆ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net