

ಸಿಂಧನೂರು: ಪ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕ ವರ್ಗದ ವಿನಾಶವಾಗುತ್ತಿದ್ದಿ, ಕಾರ್ಮಿಕರ ಕಾನೂನುಗಳನ್ನು ಮುರಿಯಲಾಗುತ್ತಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷರಾದ, ಆರ್.ಮಾನ್ಸಯ್ಯ ಹೇಳಿದರು.
ಎಪಿಎಂಸಿ ಶ್ರಮಿಕ ಭವನದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ (ಟಿಯುಸಿಐ) 9ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕೇಂದ್ರದಲ್ಲಿ ಆರ್‌ಎಸ್‌ಎಸ್ ನೇತೃತ್ವದ ಫ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕ ವರ್ಗದ ಹಕ್ಕುಗಳು, ಕಾನೂನುಗಳು ಇನ್ನಿಲ್ಲವಾಗುತ್ತಿವೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಏರ್ಪಾಡನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತ ಸಿದ್ಧಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
44 ಕಾರ್ಮಿಕ ಕಾನೂನುಗಳ ಬದಲಾಗಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಪೊರೇಟ್ ವಲಯಕ್ಕೆ ದೇಶದ ಸಂಪನ್ಮೂಲವನ್ನು ಧಾರೆ ಎರೆಯುತ್ತಾ ಕಾರ್ಮಿಕ ವರ್ಗದ ವಿನಾಶಕ್ಕೆ ಹಾದಿಯನ್ನು ಸುಗಮಗೊಳಿಸಲಾಗುತ್ತಿದೆ. ಹಕ್ಕುಗಳು ಮತ್ತು ಕಾನೂನುಗಳನ್ನು ರಕ್ಷಿಸಿಕೊಳ್ಳಲು ಕಾರ್ಮಿಕ ವರ್ಗ ಜೀವನ್ಮರಣದ ಹೋರಾಟಗಳಿಗೆ ಹೆಗಲೊಡ್ಡಬೇಕಾಗಿದೆ ಎಂದು ಆರ್.ಮಾನ್ಸಯ್ಯ ತಿಳಿಸಿದರು.
ಪ್ರಮುಖರಾದ ಎಂ.ಡಿ.ಅಮೀರ ಅಲಿ, ಚಿನ್ನಪ್ಪ ಕೊಟ್ರಿಕಿ, ಎಂ.ಗಂಗಾಧರ, ಹಟ್ಟಿ ಚಿನ್ನದ ಗಣಿ, ತುಂಗಭದ್ರಾ ನೀರಾವರಿ, ವಸತಿ ನಿಲಯ, ಉದ್ಯೋಗ ಖಾತ್ರಿ, ಆಟೋ, ಹಮಾಲಿ, ಬೀದಿಬದಿ ವ್ಯಾಪಾರಿ, ವೈದ್ಯಕೀಯ ಸೇರಿ ವಿವಿಧ ವಲಯಗಳ ಕಾರ್ಮಿಕರು ಇದ್ದರು.