

ಉಡುಪಿ: ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಮಿಕರನ್ನು ಕಾರ್ಪೊರೇಟ್ ಕಂಪೆನಿಗಳ ಸೇವಕರನ್ನಾಗಿಸಲು ಕೇಂದ್ರ ಸರ್ಕಾರ 29 ಕಾನೂನುಗಳನ್ನು ರದ್ದು ಮಾಡಿ, ಹೊಸದಾಗಿ 4 ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ಈ ಮೂಲಕ ಕಾರ್ಮಿಕ ಸಮುದಾಯದ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯ ಮೇರೆಗೆ ಉಡುಪಿ ಪ್ರಧಾನ ಅಂಚೆ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ಕಾನೂನು ಪ್ರಕಾರ 18000ಕ್ಕಿಂತ ಹೆಚ್ಚು ವೇತನ ಪಡೆಯುವವರು ಸೂಪರ್ವೈಸರ್ಗಳು ಎಂದು ಬದಲಾವಣೆ ಆಗುತ್ತದೆ. ಅಪ್ರೆಂಟೀಸ್ಗಳು, 40 ಕಾರ್ಮಿಕರಿದ್ದು ವಿದ್ಯುತ್ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು, 50ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸನ್ಸ್ ತೆಗೆದುಕೊಳ್ಳಬೇಕಿಲ್ಲ. ಇದರಿಂದಾಗಿ ಭಾರತದ ಶೇ. 70ರಷ್ಟು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. 100ಕ್ಕಿಂತ ಹೆಚ್ಚು ಕಾರ್ಮಿಕರಿದ್ದರೆ ಕಾರ್ಖಾನೆ ಮುಚ್ಚುವಿಕೆಗೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕಿತ್ತು. ಈಗ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಯಾವಾಗ ಬೇಕಾದರೂ ಕಾರ್ಖಾನೆ ತೆರೆಯಬಹುದು. ಬೇಡದಿದ್ದರೆ ಮುಚ್ಚಬಹುದಾದ ಸ್ವಾತಂತ್ರ್ಯವನ್ನು ಮಾಲೀಕರಿಗೆ ಕೊಡಲಾಗಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲು, ಓವರ್ ಟೈಮ್ 3 ತಿಂಗಳಿಗೆ 50 ಗಂಟೆ ಇದ್ದುದ್ದು ಈಗ 125 ಗಂಟೆಗೆ ಹೆಚ್ಚಿಸಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಮುಖಂಡರಾದ ಯು.ಶಿವನಂದ, ಶಶಿಕಲಾ, ಕಿರಣ್ ಹೆಗ್ಡೆ,ಶಿವರಾಮ್, ಪ್ರದಿಪ್, ಅಂಚೆ ಯೂನಿಯನ್ ಮುಖಂಡರಾದ ದಾಮೋದರ ಭಟ್ ನಾಗೇಶ್ ನಾಯಕ್ ಮತ್ತು ರಮೇಶ್, ವಿಮಾ ನೌಕರರ ಸಂಘದ ಮುಖಂಡರಾದ ಕೆ.ವಿಶ್ವನಾಥ, ಪ್ರಭಾಕರ್, ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯೆ ಭಾರತಿ ಎಸ್., ಕಾರ್ಯದರ್ಶಿ ಸುಶೀಲಾ ನಾಡ, ಕೋಶಾಧಿಕಾರಿ ಯಶೋದಾ ಮೊದಲಾದವರು ಉಪಸ್ಥಿತರಿದ್ದರು. ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕರಾದ ಕವಿರಾಜ್ ಎಸ್.ಕಾಂಚನ್ ಪ್ರಸ್ತಾವಿಕವಾಗಿ ಮಾತಾನಾಡಿದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ವಂದಿಸಿದರು. ಸಭೆ ಬಳಿಕ ಅಂಚೆ ಅಧೀಕ್ಷಕರ ಮೂಲಕ ದೇಶದ ಪ್ರಧಾನ ಮಂತ್ರಿಯವರಿಗೆ ಕಾರ್ಮಿಕರ ಬೇಡಿಕೆಗಳ ಮನವಿಯನ್ನು ನೀಡಲಾಯಿತು.