ಹುಬ್ಬಳ್ಳಿ: ಗೃಹ ನಿರ್ಮಾಣ ಕಾರ್ಮಿಕರ ಸಂಘದ 50ನೇ ವಾಷಿರ್ಕೋತ್ಸವ ಹಾಗೂ ಕಟ್ಟಡ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶವನ್ನು ನಗರದ ಇಂದಿರಾ ಗಾಜಿನ ಮನೆಯಲ್ಲಿ ಸೆ. 22ರಂದು ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಕೊಣ್ಣೂರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 9 ಗಂಟೆಗೆ ನಗರದ ರೈಲು ನಿಲ್ದಾಣ ಬಳಿಯ ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ಇಂದಿರಾ ಗಾಜಿನ ಮನೆವರೆಗೂ ನಡೆಯಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದರು.
ನಂತರ ನಡೆಯುವ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದ ಮೂಲಕ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಪಿಂಚಣಿ ಅವಧಿ 60 ವರ್ಷದಿಂದ 65ಕ್ಕೆ ಹೆಚ್ಚಿಸುವುದು, ಉಚಿತವಾಗಿ ಕಾರ್ಮಿಕರ ಕಾರ್ಡ್ ಒದಗಿಸುವುದು, ಕಾರ್ಡಿನ ನವೀಕರಣ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸುವುದು, ಪಿಂಚಣಿ ಭತ್ಯೆ, ಸಹಾಯಧನ ಹೆಚ್ಚಿಸುವುದು, ಉಚಿತ ಬಸ್ ಪಾಸ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಸಂಘದ ನಿಂಗಪ್ಪ ಬಡಿಗೇರ, ಪರಶುರಾಮ ಮ್ಯಾಗೇರಿ, ಗುರುನಾಥ ಇಳಕಲ್ಲ, ಎ.ಎಂ. ದೊಡಮನಿ, ಸಾದಿಕ್ ಮಕಾಂದಾರ ಗೋಷ್ಠಿಯಲ್ಲಿದ್ದರು.