

ಹುಬ್ಬಳ್ಳಿ: ರಾಜ್ಯದ ಎಪಿಎಂಸಿಗಳಲ್ಲಿರುವ ಅಸಂಘಟಿತ ಹಮಾಲಿ ಕಾಮಿರ್ಕರ 3ನೇ ರಾಜ್ಯ ಸಮಾವೇಶವನ್ನು ಬೆಳಗಾವಿ ಜಿಲ್ಲೆಯ ಯಲ್ಲಮ್ಮನ ಸವದತ್ತಿಯ ಎಪಿಎಂಸಿ ಆವರಣದಲ್ಲಿ ಅ. 29ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಹಮಾಲಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದಶಿರ್ ಮಹೇಶ ಪತ್ತಾರ ತಿಳಿಸಿದ್ದಾರೆ.
ಇಲ್ಲಿಯ ಅಮರಗೋಳ ಎಪಿಎಂಸಿ ಶ್ರಮಿಕ ಭವನದಲ್ಲಿ ಸಮಾವೇಶದ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾರುಕಟ್ಟೆಗಳಲ್ಲಿ ಹಮಾಲಿ ಕಾಮಿರ್ಕರ ಉದ್ಯೋಗದ ಪರಿಸ್ಥಿತಿ, ಕೃಷಿ ಮಾರಾಟ ಮಂಡಳಿಯಿಂದ ಜಾರಿಯಾಗುತ್ತಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸುವುದು, ನನೆಗುದಿಗೆ ಬಿದ್ದಿರುವ ನಿವೃತ್ತಿ ಪರಿಹಾರ, ವಸತಿ, ಕನಿಷ್ಠ ವೇತನ ಜಾರಿ ಮುಂತಾದ ಹಕ್ಕೊತ್ತಾಯಗಳು, ಸಂಘಟನಾ ಜಾಗೃತಿ ಮುಂತಾದ ವಿಷಯಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಮಾವೇಶ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಜಿ.ಎಂ.
ಗಂಗಾಧರಸ್ವಾಮಿ, ಕೃಷಿ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ ಇತರರು ಪಾಲ್ಗೊಳ್ಳುವರು.
ರಾಜ್ಯ ಹಮಾಲಿ ಕಾಮಿರ್ಕರ ಫೆಡರೇಶನ್ ಅಧ್ಯಕ್ಷ ಕೆ. ಮಹಾಂತೇಶ ಅಧ್ಯಕ್ಷತೆ ವಹಿಸುವರು.