ಜಿಲ್ಲೆಯಲ್ಲಿ 3500 ಕ್ಕೂ ಅಧಿಕ ನಕಲಿ ಕಾಮಿರ್ಕ ಕಾರ್ಡ ಪತ್ತೆ

IMG-20230328-WA0011
Published on

ಶಿವಾನಂದ ಹಿರೇಮಠ, ಗದಗ
ಜಿಲ್ಲೆಯಲ್ಲಿ ನಕಲಿ ಕಾಮಿರ್ಕ ಕಾರ್ಡ್​ಗಳನ್ನು ಒದಗಿಸುವ ಜಾಲವೊಂದು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂಬ ಬಲವಾದ ಅನುಮಾನ ಮೂಡುತ್ತಿದೆ. ಇಲಾಖೆಯಲ್ಲಿ ಹೊರ ಗುತ್ತಿಗೆ ಮೇಲೆ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ಈ ಅಕ್ರಮಕ್ಕೆ ಸಾಥ್​ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲಾಖೆ ಮೂಲಗಳೇ ವಿಜಯವಾಣಿಗೆ ತಿಳಿಸಿವೆ. ಕಾಮಿರ್ಕರಿಗೆ ಹಲವು ಹೊಸ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿರುವುದೇ ಕಾಮಿರ್ಕರ ನಕಲಿ ಕಾರ್ಡ್​ ಗಳು ಸೃಷ್ಟಿಯಾಗಲು ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತೀ ಗಂಭೀರ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾಮಿರ್ಕರ ನಕಲಿ ಕಾರ್ಡಗಳು ಪತ್ತೆ ಮಾಡಲಾಗುತ್ತಿದೆ. ಅನುಮಾನಸ್ಪದ ಕಾರ್ಡ್​ಗಳನ್ನು ಇಲಾಖೆಯು ಅಮಾನತ್ತಿನಲ್ಲಿ ಇಟ್ಟಿದೆ.

ತನಿಖೆಯಲ್ಲಿ 3532 ನಕಲಿ ಕಾಮಿರ್ಕ ಕಾರ್ಡ ಪತ್ತೆ:
ಜಿಲ್ಲೆಯಲ್ಲಿ ಒಟ್ಟು 6 ಕಾಮಿರ್ಕ ವೃತ್ತ ಕಚೇರಿಗಳಿವೆ. ಈ ವ್ಯಾಪ್ತಿಯಲ್ಲಿ ಒಟ್ಟು 111615 ಕಾಮಿರ್ಕ ಕಾರ್ಡಗಳನ್ನು ಇಲಾಖೆ ವಿತರಿಸಿದೆ. ಇವುಗಳಲ್ಲಿ ಹಲವು ಅನರ್ಹ ಕಾರ್ಡಗಳು ಇವೆ. ಕೆಲ ಸಂಟನೆಗಳು ಮತ್ತು ಅಧಿಕಾರಿಗಳ ಪ್ರಭಾವದಿಂದ ಹಲವರ ಹೆಸರನ್ನು ಕಾಮಿರ್ಕ ಪಟ್ಟಿಗೆ ಸೇರಿಸಲಾಗಿದೆ. ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ 3532 ಕಾಮಿರ್ಕರ ನಕಲಿ ಕಾರ್ಡ ಪತ್ತೆಯಾಗಿವೆ. ಸೂಕ್ತ ದಾಖಲೆಗಳಿಲ್ಲದ 3532 ಕಾರ್ಡಗಳು ವಿತರಣೆ ಆಗಿವೆ ಎಂಬುದು ಇಲಾಖಾ ತನಿಖೆಯಿಂದ ದೃಢಪಟ್ಟಿದೆ.

ಅಕ್ರಮ ಬಯಲು:
ರಾಜ್ಯದಲ್ಲಿ ಏಕಾಏಕಿ ಕಾಮಿರ್ಕ ಕಾರ್ಡಗಳ ಸಂಖ್ಯೆ ದ್ವಿಗುಣವಾದ ಹಿನ್ನೆಲೆ ರಾಜ್ಯ ಕಟ್ಟಡ ಮತ್ತು ಇತರೆ ನಿಮಾರ್ಣ ಕಾಮಿರ್ಕರ ಕಲ್ಯಾಣ ಮಂಡಳಿಯು ಜಿಲ್ಲಾ ಕಚೇರಿಗೆ ಕಾರ್ಡ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ಈ ಹಿನ್ನೆಲೆ ಜಿಲ್ಲಾ ಕಾಮಿರ್ಕ ಇಲಾಖೆ ವತಿಯಿಂದ ಪ್ರತಿಯೊಂದು ನೋಂದಾಯಿತ ಕಾರ್ಡಗಳ ಕುರಿತು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಈ ಅಕ್ರಮ ಬಯಲಾಗಿದೆ.

ಅರ್ಹ ಕಾಮಿರ್ಕರಲ್ಲೂ ಅನುಮಾನ:
ಸೂಕ್ತ ದಾಖಲೆಗಳಿಲ್ಲದ ಕಾರ್ಡಗಳ ಹೊರತಾಗಿಯೂ ಜಿಲ್ಲೆಯಲ್ಲಿ 108083 ಅರ್ಹ ಕಾಮಿರ್ಕ ಕಾರ್ಡಗಳಿವೆ. ವಾಸ್ತವದಲ್ಲಿ ಜಿಲ್ಲೆಯಲ್ಲಿ ಈ ಸಂಖ್ಯೆಯ ಕಾಮಿರ್ಕರೇ ಇಲ್ಲ ಎಂಬುದು ಸತ್ಯ. ಜಿಲ್ಲೆ ಬಹುತೇಕ ದುಡಿವ ವರ್ಗ ಪಕ್ಕದ ಗೋವಾ, ಮಂಗಳೂರು, ಪುಣೆ, ಬೆಂಗಳೂರು ನಗರವನ್ನು ಆಶ್ರಯಿಸಿದ್ದಾರೆ. ಹೀಗಾಗಿ ಅರ್ಹ ಕಾರ್ಡಗಳಮೇಲೂ ಇಲಾಖೆ ಅನುಮಾನ ವ್ಯಕ್ತ ಪಡಿಸಿದೆ.

ನೋವು ತೋಡಿಕೊಂಡ ಇಲಾಖಾ ಅಧಿಕಾರಿಗಳು:
ಕಾಮಿರ್ಕ ಕಾರ್ಡ ನೋಂದಣಿಗಾಗಿ ಜಿಲ್ಲಾ ಇಲಾಖಾ ಅಧಿಕಾರಿಗಳ ಮೇಲೆ ರಾಜಕೀಯ ಪಕ್ಷದ ಸ್ಥಳಿಯ ಮುಖಂಡರು ಪ್ರಭಾವ ಬೀರುತ್ತಿದ್ದಾರೆ ಎಂದು ಇಲಾಖಾ ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸೌಲಭ್ಯ ಸಿಗಬೇಕು ಎಂದು ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಕೋಟ್​
ಕಾಮಿರ್ಕ ಕಾರ್ಡ್​ಗಳ ವಿತರಣೆಯಲ್ಲಿ ಅನುಮಾನ ಬಂದ ಹಿನ್ನೆಲೆ ಪರಿಶೀಲಿಸಿ, ಸೂಕ್ತ ದಾಖಲೆ ಇಲ್ಲದ ಕಾರ್ಡ್​ಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಅನರ್ಹರ ಪಟ್ಟಿಯನ್ನು ಇಲಾಖಾ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಇಲಾಖೆ ಸೂಚಿಸಿದ ಅಗತ್ಯ ದಾಖಲೆಗಳನ್ನು ಕಾರ್ಡ ಪಡೆದವರು ಸಲ್ಲಿಸಬೇಕು. ಇಲ್ಲವಾದರೆ ಕಾರ್ಡ ರದ್ದಾಗುತ್ತದೆ.
- ಭೀಮರಾವ್​ ಜಾಧವ. ಜಿಲ್ಲಾ ಕಾಮಿರ್ಕ ಅಧಿಕಾರಿ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net