

ಮಡಿಕೇರಿ:
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಯೋಜನೆಗಳು ಚಾಲ್ತಿಯಲ್ಲಿವೆ. ಈ ಯೋಜನೆಗಳ ಲಾಭ ಸಿಗಬೇಕಾದರೆ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಂಡಿರಬೇಕು. ಸಾಮಾನ್ಯವಾಗಿ ಅನಕ್ಷರಸ್ತರೇ ಹೆಚ್ಚು ಇರುವ ಇವರಲ್ಲಿ ಈ ಬಗ್ಗೆ ಜಾಗೃತಿಯ ಕೊರತೆ ಇದೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚಿನ ಪ್ರಚಾರ ನಡೆಸುವ ಮೂಲಕ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಮನೆ ಕೆಲಸದವರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಬಿಸಿಯೂಟ ನೌಕರರು, ಕೂಲಿ ಕಾರ್ಮಿಕರು, ಇಟ್ಟಿಗೆ ಹೊರುವವರು, ಶೂ ಮತ್ತು ಚಪ್ಪಲಿ ಹೊಲಿಯುವವರು, ಚಿಂದಿ ಆಯುವವರು, ಬಟ್ಟೆ ಶುಚಿಗೊಳಿಸುವವರು, ರಿಕ್ಷಾ ಎಳೆಯುವವರು, ಭೂರಹಿತ ಕಾರ್ಮಿಕರು, ಕೃಷಿ ಕೂಲಿಕಾರರು, ಕಟ್ಟಡ ಕಾರ್ಮಿಕರು… ಹೀಗೆ ಹಲವು ರೀತಿಯಲ್ಲಿ ಅಸಂಘಟಿತ ವಲಯದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಇವರಿಗಾಗಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಕೊಡಗು ಸೇರಿದಂತೆ ರಾಜ್ಯಾದ್ಯಂತ ಈ ಬಗ್ಗೆ ಮಾಹಿತಿ ಕೊರತೆ ಇದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಾಮಾಜಿಕ ಭದ್ರತಾ ಯೋಜನೆಯಡಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರವನ್ನು ಕೇವಲ ೭ ಪ್ರಕರಣಗಳಲ್ಲಿ ಮಾತ್ರ ಒಟ್ಟು ೩೫ ಲಕ್ಷ ರೂ. ಕೊಡಲಾಗಿದೆ. ವಿದ್ಯಾರ್ಥಿಗಳ ಧನಸಹಾಯ ಯೋಜನೆ ಅಡಿಯಲ್ಲಿ ೧೩ ವಿದ್ಯಾರ್ಥಿಗಳು ಒಟ್ಟು ೧.೩೦ ಲಕ್ಷ ರೂ. ಧನಸಹಾಯ ಪಡೆದುಕೊಂಡಿದ್ದಾರೆ. ವಿವಿಧ ೧೧ ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್ ೧೯ರ ವಿಶೇಷ ಪ್ಯಾಕೇಜ್ ಯೋಜನೆ ೬,೨೪೫ ಮಂದಿಗೆ ಅನುಕೂಲ ಆಗಿದೆ. ಒಟ್ಟು ೧.೪೨ ಕೋಟಿ ರೂ. ಪರಿಹಾರ ನೀಡಲಾಗಿದೆ. ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲ ಆಗುತ್ತಿತ್ತು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿತಯು ಜಾರಿಗೊಳಿಸುವ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಲ್ಲಿ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ಕೊಡಗಿನಲ್ಲಿ ೭,೩೨೬ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ೩,೮೧೨ ನೋಂದಣಿ ಆಗಿದೆ. ಕೋವಿಡ್ ೧೯ರ ವಿಶೇಷ ಪ್ಯಾಕೇಜ್ ಯೋಜನೆಗೆ ೬,೨೪೫ ಕಾರ್ಮಿಕರು ನೋಂದಾವಣಿ ಮಾಡಿಕೊಂಡಿದ್ದಾರೆ. ಇಶ್ರಮ್ ಪೋರ್ಟಲ್‌ನಲ್ಲಿ ೪೮,೫೮೩ ಕಾರ್ಮಿಕರ ನೋಂದಣಿ ಆಗಿದೆ. ಆದರೆ ಜಿಲ್ಲೆಯಲ್ಲಿ ಇದಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ಅಂಘಟಿತ ವಲಯದ ಕಾರ್ಮಿಕರು ದುಡಿಯುತ್ತಿದ್ದು, ಇವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರದ ಯೋಜನೆಗಳ ಲಾಭ ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ತಲುಪಿಸುವಂತೆ ಆಗಬೇಕು ಎನ್ನುವುದು ಕಾರ್ಮಿಕ ಸಂಘಟನೆಗಳ ಮುಖಂಡರ ಅಭಿಪ್ರಾಯ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಾಮಾಜಿಕ ಭದ್ರತಾ ಯೋಜನೆಯಡಿ ಹಲವು ಕಾರ್ಯಕ್ರಮಗಳು ಚಾಲ್ತಿಯಲ್ಲಿದೆ. ಇದರಲ್ಲಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯೂ ಒಂದು. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಸಂಬಂಧಪಟ್ಟಂತೆ ಯೋಜನೆಯಡಿ ಅಪಘಾತ ಪರಿಹಾರ
ಪರಿಹಾರ ಸೌಲಭ್ಯ ಇದೆ. ಅಪಘಾತದಿಂದ ಮರಣ ಹೊಂದಿದ ಪುಕರಣಗಳಲ್ಲಿ ನಾಮನಿರ್ದೇಶಿತರಿಗೆ ೫ ಲಕ್ಷ, ಸಂಪೂರ್ಣ ಅಥವಾ ಶಾಶ್ವತ ದುರ್ಬಲತೆ ಪ್ರಕರಣಗಳಲ್ಲಿ ಫಲಾನುಭವಿಗೆ ೨ ಲಕ್ಷದ ತನಕ ಪರಿಹಾರ ಹಾಗೂ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ೧ ಲಕ್ಷ ರೂ. ತನಕ ಚಿಕಿತ್ಸಾ ವೆಚ್ಚದ ಮರುಪಾವತಿ ವ್ಯವಸ್ಥೆ ಇದೆ. ಅಪಘಾತದಿಂದ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಗರಿಷ್ಠ ಇಬ್ಬರು ಮಕ್ಕಳಿಗೆ ಒಂದನೇ ತರಗತಿಯಿಂದ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ ತಲಾ ೧೦ ಸಾವಿರ ರೂ. ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಡಿ ೧೧ ಅಸಂಘಟಿತ ವರ್ಗಗಳಾದ ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಟೈಲರ್, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕರನ್ನು ಆನ್‌ಲೈನ್ ಮೂಲಕ ಉಚಿತವಾಗಿ ನೋಂದಾಯಿಸಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಸದ್ಯದ ಮಟ್ಟಿಗೆ ಯಾವುದೇ ಆರ್ಥಿಕ ಸೌಲಭ್ಯಗಳು ಈ ಯೋಜನೆಯಲ್ಲಿ ಇಲ್ಲ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ ಇ-ಶ್ರಮ್ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಈ ಯೋಜನೆಯಡಿ ೧೬-೫೯ ವಯೋಮಾನದ ಇ.ಎಸ್.ಐ ಹಾಗೂ ಇ.ಪಿ.ಎಫ್ ಸೌಲಭ್ಯವನ್ನು ಹೊಂದಿರದ ಹಾಗೂ ಆದಾಯ ತೆರಿಗೆ ಪಾವತಿ ಮಾಡದ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿದೆ,. ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಗ್ರಾಮ್ ಒನ್ ಮೂಲಕ ಅಥವಾ ಸ್ವಯಂ ಆಗಿ ಈ ಶ್ರಮ್ ವೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಬಹುದಾಗಿದೆ. ಸ್ಥಳದಲ್ಲೇ ಗುರುತಿನ ಚೀಟಿಯೂ ಸಿಗುತ್ತದೆ. ಈ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಲಾಭ ಪಡೆಯಬಹುದು. ಇದು ಅಪಘಾತ ವಿಮೆಯಾಗಿದ್ದು, ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ ೨ ಲಕ್ಷ ರೂ., ಭಾಗಶಃ ಅಂಗವೈಕಲ್ಯಕ್ಕೆ ೧ ಲಕ್ಷ ರೂ. ಪರಿಹಾರದ ಪಯೋಜನ ಪಡೆಯಬಹುದಾಗಿದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಯಾಯ ಯೋಜನೆಗಳಿಗೆ ಸಂಬಂಧಿಸಿದಂತೆ ನೋಂದಣಿ ಕಡ್ಡಾಯ ಆಗಿದೆ. ನೋಂದಾಯಿತ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಅವರ ಕುಟುಂಬವನ್ನು ಮಾತ್ರ ರಾಜ್ಯ ಅಥವಾ ಕೇಂದ್ರ ಸರ್ಕಾರ ಪರಿಗಣಿಸುತ್ತದೆ. ಈ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚು ಹೆಚ್ಚು ನೋಂದಣಿ ಆಗುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ಇಲಾಖೆಗಳ ಕರ್ತವ್ಯ ಆಗಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡರು.