

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಈಗಾಗಲೇ ಕಟಾವಿಗೆ ಬಂದಿದ್ದು ದೀಪಾವಳಿ ನಂತರ ಕಟಾವು ಬಿರುಸು ಪಡೆಯಲಿದೆ.
ಕಳೆದ ವಾರ ಉತ್ತಮ ಮಳೆಯಾಗಿದ್ದು ಮೆಕ್ಕೆಜೋಳ ಜಮೀನುಗಳಲ್ಲಿ ತೇವಾಂಶ ಇರುವುದರಿಂದ ಕಟಾವು ಮಾಡಿದ ನಂತರ ತೆನೆಗಳನ್ನು ಟ್ರ್ಯಾಕ್ಟರ್ನಲ್ಲಿ ತುಂಬಿ ಹೊರಗೆ ತರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸದ್ಯಕ್ಕೆ ನಿಧಾನಗತಿಯಲ್ಲಿ ಸಾಗಿದೆ.
ಈ ನಡುವೆ ಮೆಕ್ಕೆಜೋಳ ಕಟಾವಿಗೆ ಕೂಲಿ ಕಾರ್ವಿುಕರ ಸಮಸ್ಯೆ ಎದುರಾಗಿದೆ. ಅಡಕೆ ಕೀಳಲು, ಸುಲಿಯಲು ಹಾಗೂ ಕೆಲವರು ನಗರ ಪ್ರದೇಶಗಳಿಗೆ ಹೋಗಿರುವ ಹಿನ್ನೆಲೆಯಲ್ಲಿ ಕೂಲಿಕಾರರ ಕೊರತೆ ಕಾಣುತ್ತಿದೆ.
ಕಳೆದ ವರ್ಷ ಕೂಲಿಕಾರರು 10-12 ಜನರ ತಂಡ ಕಟ್ಟಿಕೊಂಡು ಆನಗೋಡು, ನೇರ್ಲಿಗೆ, ಕೊಡಗನೂರು, ಸುಲ್ತಾನಿಪುರ, ಗಂಗನಕಟ್ಟೆ, ಚಿನ್ನಸಮುದ್ರ, ಕಂದನ ಕೋವಿ, ಸಿದ್ದನೂರು, ಅಗಸನಕಟ್ಟೆ, ರುದ್ರನಕಟ್ಟೆ, ಹುಣಸೆಕಟ್ಟೆ, ಹಾಲುವರ್ತಿ, ಗುಡಾಳು, ಗುಮ್ಮನೂರು, ಮಂಡಲೂರು, ಕಾಟಿಹಳ್ಳಿ ನೀರ್ಥಡಿ, ಹೊನ್ನೂರು ಗ್ರಾಮಗಳಲ್ಲಿ ಗುತ್ತಿಗೆ ಲೆಕ್ಕದಲ್ಲಿ ಪ್ರತಿ ಎಕರೆಗೆ 2,500 ರೂ. ನಿಗದಿ ಮಾಡಿದ್ದರು. ಅದರಲ್ಲಿ ಮಹಿಳೆಯರಿಗೆ 300 ರೂ.,ಪುರುಷರಿಗೆ 400 ರೂ. ನಿಗದಿ ಆಗಿತ್ತು
ನರಗನಹಳ್ಳಿ, ದಿಂಡದಹಳ್ಳಿ, ಅಣ್ಣಾಪುರ, ಪರಶುರಾಂಪುರ, ಬೊಮ್ಮೇನಹಳ್ಳಿ, ಹೊನ್ನ ನಾಯಕನಹಳ್ಳಿ, ಮಾಯಕೊಂಡ, ಬಾವಿಹಾಳ್ ಇತರೆಡೆ ಪ್ರತಿ ಎಕರೆಗೆ ಗುತ್ತಿಗೆ ದರ 2800 ರೂ. ಹೇಳುತ್ತಿದ್ದಾರೆ.
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಧಾರಣೆ ಪ್ರತಿ ಕ್ವಿಂಟಲ್ಗೆ 1500- 2000 ರೂ. ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ರೈತರು.
ಮಾಯಕೊಂಡ,ಆನಗೋಡಲ್ಲಿ ಸರ್ಕಾರ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದರೆ ನಗರ ಪ್ರದೇಶಗಳ ಮಾರುಕಟ್ಟೆಗಳಿಗೆ ಮೆಕ್ಕೆಜೋಳ ಸಾಗಿಸುವ ಖರ್ಚು ಉಳಿಯುತ್ತದೆ.
ಮೆಕ್ಕೆಜೋಳ ಬೆಳೆಯಲು ಪ್ರತಿ ಎಕರೆಗೆ ಬಿತ್ತನೆಯಿಂದ -ಕಟಾವುವರೆಗೆ 18 ರಿಂದ 20 ಸಾವಿರ ರೂ. ಖರ್ಚು ಬರುತ್ತದೆ. ಸರ್ಕಾರ ಕನಿಷ್ಠ 4 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. | ಏಳುಕೋಟಿ, ಕೃಷಿಕ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಮೆಕ್ಕೆಜೋಳ ಮಾತ್ರವಲ್ಲದೆ ಭತ್ತ, ಶೆಂಗಾ ಇತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. | ಕೆ.ಎಸ್. ಬಸವಂತಪ್ಪ. ದಾವಣಗೆರೆ ತಾಲೂಕಿನಲ್ಲಿ 28,550 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಬೆಳೆ ಈಗಾಗಲೇ ಕಟಾವಿಗೆ ಬಂದಿದೆ. ತೇವಾಂಶ ನೋಡಿಕೊಂಡು ಕಟಾವು ಮಾಡಬೇಕು. | ಡಿ.ಎಂ. ಶ್ರೀಧರ ಮೂರ್ತಿ, ಎಡಿಎ, ಕೃಷಿ ಇಲಾಖೆ, ದಾವಣಗೆರೆ.