

ಕೊಳ್ಳೇಗಾಲ: ಪಟ್ಟಣದಲ್ಲಿ ಮರ ಕಟಾವು ಮಾಡುವ ವೇಳೆ ಕೂಲಿ ಕಾರ್ಮಿಕ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ.
ತಾಲೂಕಿನ ಪ್ರಕಾಶ್ ಪಾಳ್ಯ ಗ್ರಾಮದ ಲೂಯಿಸ್ ಅಬ್ರಾಹಂ (35) ಗಾಯಗೊಂಡ ಕಾರ್ಮಿಕ.
ಪಟ್ಟಣದ ನ್ಯಾಯಾಲಯ ಮುಂಭಾಗದ ರಸ್ತೆ ಬದಿಯಲ್ಲಿರುವ ಒಣಗಿದ ಅರಳಿ ಮರವನ್ನು ಕಟಾವು ಮಾಡಲು ಅರಣ್ಯ ಇಲಾಖೆ ಕರೆದಿದ್ದ ಟೆಂಡರ್ ಅನ್ನು ವೆಂಕಟೇಶ್ವರ ಶಾಮೀಲು ಮಾಲೀಕರ ಅಶೋಕ್ ಪಡೆದುಕೊಂಡಿದ್ದರು. ಅಂತೆಯೇ ಐದಾರು ಕೂಲಿ ಕಾರ್ಮಿಕರು ಮರ ಕಟಾವು ಮಾಡುವಲ್ಲಿ ನಿರತರಾಗಿದ್ದರು. ಈ ವೇಳೆ ಕೂಲಿ ಕಾರ್ಮಿಕ ಲೂಯಿಸ್ ಅಬ್ರಾಹಂ 12 ಅಡಿ ಎತ್ತರದಲ್ಲಿ ಬೆಲ್ಟ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ ವೇಳೆ ಮರದ ತುಂಡು ಬಡಿದು ಹಾಕಿದ್ದ ಬೆಲ್ಟ್ ತುಂಡಾಗಿದ್ದರಿಂದ ಕೆಳಗೆ ಬಿದ್ದಿದ್ದು, ತೀವ್ರವಾಗಿ ಕೈಗೆ ಪೆಟ್ಟಾಗಿದೆ.
ತಕ್ಷಣ ಗಾಯಾಳುವನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.