ಅಪಾರ್ಟ್‌ಮೆಂಟ್‌ನಿಂದ ಬಿದ್ದು ಕಾರ್ಮಿಕ ಸಾವು

CRIME police
Published on

ಮೈಸೂರು: ನಗರದ ಅಗ್ರಹಾರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಪ್ಲಾಸ್ಟಿಕ್ ಜಾಲರಿ ಅಳವಡಿಸುತ್ತಿದ್ದ ಕಾರ್ಮಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ.


ಅಪಾರ್ಟ್‌ಮೆಂಟ್‌ನಲ್ಲಿ ಪಾರಿವಾಳಗಳ ಹಾವಳಿ ಜಾಸ್ತಿ ಇದ್ದ ಕಾರಣ ಅಲ್ಲಿನ ನಿವಾಸಿಗಳು ಸೇರಿ ಪ್ಲಾಸ್ಟಿಕ್ ಜಾಲರಿ ಅಳವಡಿಸಲು ಕಾರ್ಮಿಕರಾದ ರಮಣ ಹಾಗೂ ಲವರಾಜ್ ಎಂಬುವರಿಗೆ ಕೆಲಸ ನೀಡಿದ್ದರು.


ಬೆಳಗ್ಗೆ ಕೆಲಸ ಆರಂಭಿಸಿದ ರಮಣ ಹಾಗೂ ಲವರಾಜ್, ಟೀ ಅಂಗಡಿಯ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯನ್ನು ಜಾಲರಿ ಅಳವಡಿಸುವ ಕೆಲಸಕ್ಕೆ ಕರೆ ತಂದಿದ್ದರು. ಅಪರಿಚಿತ ಕಾರ್ಮಿಕ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಜಾಲರಿ ಅಳವಡಿಸುತ್ತಿದ್ದ. ಈ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುರಕ್ಷತೆ ಕ್ರಮ ಕೈಗೊಳ್ಳದೆ ಅಪರಿಚಿತನಿಗೆ ಕೆಲಸ ವಹಿಸಿದ್ದ ಲವರಾಜ್, ರಮಣ, ಅಪಾರ್ಟ್‌ಮೆಂಟ್ ನಿವಾಸಿಗಳಾದ ರಜನಿ, ಆನಂದ್, ವ್ಯವಸ್ಥಾಪಕ ಶಶಿಧರ್ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಗುರುತು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net