4 ಕಾರ್ಮಿಕ ಸಂಹಿತೆಗಳನ್ನು ರದ್ದಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

RAICHUR
RAICHUR
Published on

ರಾಯಚೂರು ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಜೆಸಿಟಿಯು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕಾರ್ಮಿಕ ವಿರೋಧಿಯಾಗಿರುವ ಕಾಯ್ದೆಗಳ ಕಾರ್ಮಿಕರ ಹಕ್ಕುಗಳು ಮತ್ತು ಸೌಕರ್ಯಗಳನ್ನು ಕಸಿದುಕೊಳ್ಳುವ ಕೇಂದ್ರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಕೆಲಸದ ಅವಧಿ, ಹೋರಾಟದ ಹಕ್ಕನ್ನು ಹತ್ತಿಕ್ಕುತ್ತಿರುವ ಕಾಯ್ದೆಗಳನ್ನ ಜಾರಿಗೆ ತರಬಾರದು ಎಂದು ಘೋಷಣೆ ಕೂಗಿದರು.

ಈ ವೇಳೆ ಕಾರ್ಮಿಕ ಸಂಘಟನೆಗಳ ಸಂಚಾಲಕ ಎನ್.ಎಸ್.ವೀರೇಶ ಮಾತನಾಡಿ, ಕಾರ್ಮಿಕರ ಖಾಯಂಗೊಳಿಸುವುದು, ಗುತ್ತಿಗೆ, ಅಸಂಘಟಿತ, ಹಾಗೂ ಸ್ಕೀಮ್ ನೌಕರರು ರಾಷ್ಟ್ರ ವ್ಯಾಪ್ತಿ 26 ಸಾವಿರ, ರಾಜ್ಯವ್ಯಾಪಿ 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು, ಗುತ್ತಿಗೆ, ಹೊರಗುತ್ತಿಗೆ, ಅಪ್ರೆಂಟಿಸ್, ಟ್ರೈನಿ, ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು, ಅಸಂಘಟಿತ ಎಲ್ಲಾ ಕಾರ್ಮಿಕರಿಗೆ ಮಾಸಿಕ 9 ಸಾವಿರ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಎನ್‌ಪಿಎಸ್, ಯುಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಆಹಾರ, ಔಷಧಿಗಳು, ಕೃಷಿ ಸಾಮಗ್ರಿಗಳು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ್ ಕೇಂದ್ರೀಯ ಅಬಕಾರಿ ಸುಂಕ ಇಳಿಕೆ ಮಾಡಬೇಕು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರದ ಭದ್ರತೆ ಖಾತ್ರಿಪಡಿಸಬೇಕು ಎಂದರು. ವಿದ್ಯುತ್ ಮಸೂದೆ ತಿದ್ದುಪಡಿಯನ್ನು ಹಿಂಪಡೆಯಬೇಕು, ವಿದ್ಯುತ್ ಖಾಸಗೀಕರಣ, ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಕಾನೂನು ರೂಪಿಸಬೇಕು, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು, ಸಾಲಮನ್ನಾ, ಬೆಳೆ ವಿಮೆ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ದೇಶದ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಖಾಸಗೀಕರಣ ಮೂಲಕ ದುರ್ಲಲಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಸೇರಿದಂತೆ ಕಾರ್ಮಿಕ ವಿರೋಧಿ ಸಂಹಿತೆಗಳ ಹಿಂಪಡೆಗೆ ಒತ್ತಾಯಿಸಿ ಕೆನರಾ ಬ್ಯಾಂಕ್ ನೌಕರರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಸಾರ್ವಜನಿಕ ಬ್ಯಾಂಕ್‌ಗಳನ್ನು ಬಲಪಡಿಸಬೇಕು, ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು, ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ನಿಲ್ಲಿಸಬೇಕು, ಸಾರ್ವಜನಿಕ ವಿಮಾ ಕಂಪನಿಗಳನ್ನು ಒಗ್ಗೂಡಿಸಬೇಕು, ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಬೇಕು, ಗುತ್ತಿಗೆ ನೇಮಕಾತಿ ನಿಲ್ಲಿಸಬೇಕು ಎನ್‌ಪಿಎಸ್ ರದ್ದುಪಡಸಬೇಕು, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಹೆಚ್. ಪದ್ಮಾ, ಶ್ರೀಶೈಲರೆಡ್ಡಿ, ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ, ಮಹೇಶ ಚೀಕಲಪರ್ವಿ, ಅಣ್ಣಪ್ಪ, ಮಲ್ಲನಗೌಡ, ಎಂ.ರವಿ ಕುಮಾರ, ತಿಮ್ಮಪ್ಪಸ್ವಾಮಿ, ರಂಗಪ್ಪ ಅಸ್ಕಿಹಾಳ, ಕುಮಾರ ವೈ, ಸಲಾವುದ್ದಿನ್, ಗಣೇಶ, ವಸಂತ ಮಾಧವ, ರೂಪ ಲಕ್ಷ್ಮೀ, ಸಚಿನ್, ಶೃತಿ, ರವಿ ಕುಮಾರ ಆದೋನಿ ಸೇರಿದಂತೆ ಅನೇಕ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net