

ಕೊಳ್ಳೇಗಾಲ: ಕರೊನಾ ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿ ನೌಕರಿ ಕಳೆದುಕೊಂಡ ಕಾರ್ವಿುಕರೊಬ್ಬರು ಸ್ವಗ್ರಾಮಕ್ಕೆ ಬಂದು ಪತ್ನಿಯ ನೆರವಿನೊಂದಿಗೆ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಸರಗೂರು ಗ್ರಾಮದ ಉಮೇಶ್ ಆರಾಧ್ಯ ಹಾಗೂ ಸೌಮ್ಯಾ ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಉಮೇಶ್ ಅಗರಬತ್ತಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್ನಲ್ಲಿ ಕೋವಿಡ್ ಕಾರಣದಿಂದ ನೌಕರಿ ಇಲ್ಲದೆ ಕಂಗೆಟ್ಟಿದ್ದ ಉಮೇಶ್, ಪತ್ನಿ ಸಮೇತ ಸ್ವಗ್ರಾಮಕ್ಕೆ ಬಂದರು.
ಇಲ್ಲೂ ಮಾಡಲು ಕೆಲಸವಿರಲಿಲ್ಲ. ಈ ಹಿಂದೆ ಕರ್ಪರ ತಯಾರಿಕೆ ತರಬೇತಿ ಪಡೆದಿದ್ದ ಸೌಮ್ಯಾ ಮನೆಯಲ್ಲೇ ಕರ್ಪರ ತಯಾರಿಕೆ ಘಟಕ ಆರಂಭಿಸಿದರು. ಅದಕ್ಕೆ ಉಮೇಶ್ ತಾಯಿ ಪಾರ್ವತಮ್ಮ ಬೆಂಬಲವಾಗಿ ನಿಂತರು. ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಲ್ಲಿ ಬ್ಯಾಂಕಿನಿಂದ 2 ಲಕ್ಷ ರೂ. ಸಾಲಸೌಲಭ್ಯ ಪಡೆದು, 2 ಕರ್ಪರ ತಯಾರಿಸುವ ಯಂತ್ರ ಖರೀದಿಸಿ, 9 ತಿಂಗಳಿಂದ ಕರ್ಪರ ತಯಾರಿಸುತ್ತಾ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ.
ಕರ್ಪರ ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಬೆಂಗಳೂರಿನಿಂದ ಖರೀದಿಸಿ ತರುವ ಉಮೇಶ್, ಆಧುನಿಕತೆಗೆ ತಕ್ಕಂತೆ ಯಂತ್ರದ ಸಹಾಯದಿಂದ ವಿವಿಧ ಆಕೃತಿಯ ಕರ್ಪರಗಳನ್ನು ತಯಾರಿಸಿ, ತಾವೇ ನೇರವಾಗಿ ಮಾರಾಟದಲ್ಲಿ ತೊಡಗಿದ್ದಾರೆ. ಜತೆಗೆ, ಇಬ್ಬರು ಮಹಿಳೆಯರಿಗೂ ಉದ್ಯೋಗ ನೀಡಿದ್ದಾರೆ. ಧೂಪ ಹಾಗೂ ಗಂಧದಕಡ್ಡಿ ತಯಾರಿಸಿ ಮಾರಾಟ ಮಾಡುವ ಗುರಿಯನ್ನೂ ಹೊಂದಿದ್ದಾರೆ.
ಸದ್ಯ 5 ದಿನಕ್ಕೆ 30 ಕೆಜಿಯಷ್ಟು ಕರ್ಪರ ತಯಾರಿಸುತ್ತಿದ್ದು ಬೇಡಿಕೆ ಹೆಚ್ಚಿಸಿಕೊಂಡು, ಹನೂರು ಭಾಗವನ್ನು ಕರ್ಪರ ಮಾರಾಟ ಕೇಂದ್ರವಾಗಿಸಿಕೊಂಡಿದ್ದಾರೆ.
ಜೀವನ ನಿರ್ವಹಣೆಗಾಗಿ ಕರ್ಪರ ತಯಾರಿಕೆಯಲ್ಲಿ ತೊಡಗಿದ್ದೇನೆ. ಸದ್ಯ ನನ್ನ ಜೀವನಕ್ಕೆ ಈ ಮಾರ್ಗವೇ ಸರಿ ಎನಿಸಿದೆ. ಮುಂದೆ ಅವಕಾಶ ಸಿಕ್ಕರೂ ಬೆಂಗಳೂರಿಗೆ ಹೋಗುವುದಿಲ್ಲ. | ಉಮೇಶ್ ಆರಾಧ್ಯ, ಕರ್ಪರ ತಯಾರಿಕೆ ಉದ್ಯಮಿ