

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನೋಡಿಕೊಳ್ಳುವ ಸಂಪೂರ್ಣ ಜಬಾಬ್ದಾರಿ ಆಯಾ ಕಂಪನಿಗಳ ಮಾಲೀಕರಿಗೆ ಸೇರಿದೆ, ಈ ಬಗ್ಗೆ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ತಾಲೂಕಿನ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ರೈತರ ಸಭೆಯಲ್ಲಿ ಮಾತನಾಡಿ, ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಜತೆ ಚರ್ಚಿಸಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮಲ್ಲಿರುವ ನೌಕರರನ್ನು ನೋಡಿಕೊಳ್ಳಬೇಕು. ಸಮಸ್ಯೆ ಕಂಡು ಬಂದರೆ ತಾಲೂಕುಮಟ್ಟದ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದರು.
ರೈತರ ಬೆಳೆಗೆ ಬೆಲೆ ಸಿಗದ ಕಾರಣ ಜಿಲ್ಲೆಯ ರೈತರು ತರಕಾರಿಯನ್ನು ತಾವೇ ಬೆಲೆ ನಿಗದಿಪಡಿಸಿ ಬೆಂಗಳೂರಿನ ಪ್ರತಿ ವಾರ್ಡ್‌ನ ಸ್ಥಳೀಯ ವ್ಯಾಪಾರಿಗಳ ಜತೆ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವುದು. ಈಗಾಗಲೇ 5 ಸಾವಿರ ತಳ್ಳುಗಾಡಿ ಸಣ್ಣ ವ್ಯಾಪಾರಿಗಳನ್ನು ನೋಂದಣಿ ಮಾಡಿದ್ದು ರೈತರು ನೇರವಾಗಿ ಮಾರಾಟ ಮಾಡಬಹುದು ಎಂದರು.
ತರಕಾರಿಯನ್ನು ರೈತರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪದ್ಮನಾಭನಗರದಲ್ಲಿ ಆರಂಭಿಸಲಾಗುವುದು. ಇಲ್ಲಿ ಯಶಸ್ವಿಯಾದರೆ 28 ಕ್ಷೇತ್ರಗಳಿಗೆ ವಿಸ್ತರಿಸಲಾಗುವುದು. ಈ ಕಾರ್ಯವು ನಿರಂತರವಾಗಿ ನಡೆದರೆ ರೈತರಿಗೆ ಲಾಭ ಸಿಗಲಿದೆ. ಹೂವು ಬೆಳೆಗಾರರಿಗೆ ಪರ‌್ಯಾಯ ಮಾರ್ಗವಿರದ ಕಾರಣ ಸಹಾಯಧನ ನೀಡಲು ಸಿಎಂ ಜತೆ ಚರ್ಚಿಸಲಾಗುವುದು ಎಂದರು.
ಬಡ್ಡಿ ಮನ್ನಾ: ಮೂರು ತಿಂಗಳ ಬಡ್ಡಿ ಮನ್ನಾ ಮಾಡಲು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದ ಸಚಿವ ಆರ್.ಅಶೋಕ್ ಜಿಲ್ಲೆಯಲ್ಲಿ ಸೋಂಕಿತ ಗ್ರಾಮಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಅಗತ್ಯ ಔಷಧ, ಊಟ, ದಿನಸಿ, ತರಕಾರಿ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಕಲ್ಪಿಸಬೇಕು. ಸೋಂಕಿತ ಗ್ರಾಮದ ಒಳಗೆ ಹೊರಗೆ ಹೋಗದಂತೆ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಾಯೋಗಿಕ ಆರಂಭ: ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರು ನಗರದಲ್ಲಿ ತರಕಾರಿ ಹಣ್ಣಿನ ಬೆಲೆ ಗಗನಕ್ಕೇರಿದೆ. ಆದರೆ ಪಕ್ಕದಲ್ಲಿರುವ ರೈತ ಬೆಲೆ ಸಿಗದೆ ಬೆಳೆ ನಾಶ ಮಾಡುತ್ತಿದ್ದಾನೆ. ಆದ್ದರಿಂದ ಗ್ರಾಮಾಂತರ ಜಿಲ್ಲೆಯ ರೈತರು ಗ್ರಾಹಕರಿಗೆ ನೇರವಾಗಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ಪ್ರ್ರಾಯೋಗಿಕವಾಗಿ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಸ್ಥಳೀಯ ರೈತರ ಜತೆ ಸಭೆ ನಡೆಸಿ ಆರಂಭಿಸಬಹುದು. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಪರವಾಗಿದ್ದು ಕೃಷಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿವೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಎಸ್ಪಿ ರವಿ ಡಿ.ಚೆನ್ನಣ್ಣನವರ್ ಮತ್ತಿತರರು ಇದ್ದರು.
ಸರ್ಕಾರದಲ್ಲಿ ಹಣದ ಕೊರತೆ ಇಲ್ಲ: ಆಶ್ರಯ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಫಲಾನುಭವಿಗಳಿಗೆ ಮುಂಗಡವಾಗಿ ಪಡಿತರ ನೀಡಲು ಸರ್ಕಾರ ಆದೇಶಿಸಿದ್ದು, ಅದರಂತೆ ಪಡಿತರದಾರರಿಗೆ ಆಹಾರ ಧಾನ್ಯಗಳು ವಿತರಣೆಯಾಗಬೇಕು. ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ವೈದ್ಯಕೀಯ ಸಿಬ್ಬಂದಿಗೆ ಬೇಡಿಕೆಗೆ ಅನುಗುಣವಾಗಿ ಸುರಕ್ಷತಾ ಸಾಮಾಗ್ರಿಗಳನ್ನು ಪೂರೈಸಬೇಕು. ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದ್ದು, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಮುಂದಿರುವ ಸವಾಲು. ಇದನ್ನು ಎಲ್ಲರೂ ಜತೆಗೂಡಿ ನಿಭಾಯಿಸಲು ಮುಂದಾಗಬೇಕಿದೆ ಎಂದು ಅಶೋಕ್ ಕರೆ ನೀಡಿದರು.