

ಹೂವಿನಹಡಗಲಿ: ಪ್ರಸ್ತುತ ದಿನದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಶ್ರಮಿಸುತ್ತಿರುವ ಕಾರ್ಮಿಕರು ರಾಜಕೀಯ ಜ್ಞಾನವನ್ನು ಹೊಂದುವುದು ಅವಶ್ಯಕ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಅಧ್ಯಕ್ಷ ಡಾ.ಕೆ.ಎಸ್.ಜನಾರ್ಧನ ಹೇಳಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ಸಹಕರಿಸಿ
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಎಐಟಿಯುಸಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವಕಾರ್ಮಿಕರ ದಿನಾಚರಣೆ ಮತ್ತು 2ನೇ ತಾಲೂಕು ಕಾರ್ಮಿಕರ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅನೇಕ ಸಂಘ ಸಂಸ್ಥೆಗಳ ಜತೆಗೂಡಿ ದುಡಿಯುವ ವರ್ಗದವರ ಪರವಾಗಿ ಹೋರಾಟಗಳನ್ನು ಮಾಡಲಾಗುತ್ತಿದೆ. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಕಾರ್ಮಿಕರ ಸೆಸ್ ರೂಪದಲ್ಲಿರುವ ಕೋಟ್ಯಂತರ ಹಣ ಸಮರ್ಪಕವಾಗಿ ಬಳಕೆಯಾಗದೆ ಕೊಳೆಯುತ್ತಿದೆ.
ಆದರೆ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಸಂಘಟನೆಗಳು ಸುಮ್ಮನೆ ಕುಳಿತುಕೊಳ್ಳಬಾರದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದು, ಮುಸ್ಲಿಂ ಅನ್ಯೂನ್ಯವಾಗಿ ಜೀವಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ತಾಪಂ ಇಒ ಉಮೇಶ್ ಮೈನಹಳ್ಳಿ ಮಾತನಾಡಿ, ಸಂಘಟನೆಗಳು ಎಲ್ಲರಲ್ಲೂ ಸಮಾನತೆಯನ್ನು ಸಾರುವ ಮೂಲಕ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಬೇಕು. ಸಂಘಟನೆಯ ಹೋರಾಟದಿಂದ ಅನೇಕ ಕಾರ್ಮಿಕರು ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ್, ಸಿಡಿಪಿಒ ರಾಮನಗೌಡ, ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಮೌನೇಶ್, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಇಪ್ಟಾ ಸಂಘಟನೆ ರಾಜ್ಯ ಉಪಾಧ್ಯಕ್ಷ ಚಮಾನ್ಸಾಬ್, ಎಐವೈಎಫ್ ತಾಲೂಕು ಸಂಚಾಲಕ ಬಸವರಾಜ್ ಸಂಶಿ, ಎಐಟಿಯುಸಿ ರಾಜ್ಯ ಸಂಘಟನೆ ಸದಸ್ಯ ಸುರೇಶ್, ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಅನಸೂಯ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ ಇತರರಿದ್ದರು.