ಸ್ವಚ್ಛತೆ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ದೊಡ್ಡದು: ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಶ್ಲಾಘನೆ

Labor Education Day Mandya
Published on

ಮಂಡ್ಯ: ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಕಾರ್ಮಿಕರ ಶ್ರಮ ದೊಡ್ಡದು ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಶ್ಲಾಘಿಸಿದರು.

ನಗರಸಭೆ ಕಚೇರಿಯಲ್ಲಿ ದತ್ತೋಪಂತ್ ತೆಂಗಡಿ, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ನಗರಸಭೆ ಮತ್ತು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಕಾರ್ಮಿಕರ ಶಿಕ್ಷಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಹಿತ ಕಾಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಜಾರಿಗೊಳಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ನಿಗದಿತ ವೇಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿರುತ್ತಾರೆ. ಅವರಿಗೆ ಸೌಲಭ್ಯ ದೊರಕಿಸಿಕೊಡುವ ಹೊಣೆ ಜನಪ್ರತಿನಿಧಿ ಮತ್ತು ಸ್ವಯಂಸೇವಾ ಸಂಸ್ಥೆಗಳ ಮೇಲಿದೆ. ಆರೋಗ್ಯವಂತ ಕಾರ್ಮಿಕ ಉತ್ತಮವಾದ ಕಾಯಕವನ್ನು ಮಾಡಬಹುದಾಗಿದೆ. ಅದರಂತೆ ದುಶ್ಚಟಕ್ಕೆ ಬಲಿಯಾಗದೆ ಸದೃಢ ದೇಹವನ್ನು ಹೊಂದಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಮಂಡಳಿಯ ಪ್ರಾದೇಶಿಕ ನಿರ್ದೇಶಕಿ ಡಾ.ಸಂಧ್ಯಾರಾಣಿ ಮಾತನಾಡಿ, ಸಫಾಯಿ ಕರ್ಮಚಾರಿಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಪ್ರಯೋಜನ ನಗರ, ಪಟ್ಟಣ ಪಂಚಾಯಿತಿ, ಪುರಸಭಾ ವ್ಯಾಪ್ತಿಯ ಕಾರ್ಮಿಕರಿಗೆ ದೊರಕಬೇಕಿದೆ ಎಂದರು.

ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್‌ಕುಮಾರ್, ಪೌರ ಕಾರ್ಮಿಕರ ಸೇವಾ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net