

ಮಂಡ್ಯ: ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಆರ್ಥಿಕ ಸ್ಥಿತಿ ಬಲವರ್ಧನೆಯ ಜತೆಗೆ ಜನರ ಜೀವನ ಮಟ್ಟವೂ ಉತ್ತಮವಾಗುತ್ತದೆ ಎಂದು ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಪಿ. ರವಿಕುಮಾರ್ ತಿಳಿಸಿದರು.
ನಗರದ ಸುರಭಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಅಧಿಕಾರಿಗಳು, ಕಾರ್ಮಿಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆ ತಾಯಿ ಇದ್ದಂತೆ. ತಾಯಿ ಚೆನ್ನಾಗಿದ್ದರೆ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕಾರ್ಮಿಕರು ಮತ್ತು ಮಾಲೀಕರ ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಆ ಭಾಗದ ಎಲ್ಲ ಚಟುವಟಿಕೆಗಳೂ ಸುಗಮವಾಗಿ ನಡೆಯುತ್ತವೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತದೆ. ಎಲ್ಲರ ಸ್ಥಿತಿ ಗತಿ ಉತ್ತಮವಾಗಿರುತ್ತದೆ. ಯಾವುದೇ ಒಂದು ವಿವಾದ ಬಂದಾಗ ಅದನ್ನು ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಸದ್ಭಾವನೆಯಿಂದ ಪರಿಹರಿಕೊಳ್ಳಬೇಕು. ಇಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ ಎಂದು ಹೇಳಿದರು.
ಕೈಗಾರಿಕೆಗಳಲ್ಲಿ ಸಮಸ್ಯೆ ಎದುರಾದರೆ ನಮ್ಮ ಚೌಕಟ್ಟಿನಲ್ಲೇ ಬಗೆಹರಿಸಿಕೊಳ್ಳುವ ಸ್ಥಿತಿಯನ್ನು ನಾವು ರೂಢಿಸಿಕೊಳ್ಳಬೇಕು. ಸರ್ಕಾರದ ಮಟ್ಟಕ್ಕೆ ಹೋದರೆ ಸ್ವಲ್ಪಮಟ್ಟಿಗೆ ಗೊಂದಲ ಉಂಟಾಗಬಹುದು. ಸಮಸ್ಯೆಯನ್ನು ದೊಡ್ಡದು ಮಾಡುವುದರಿಂದ ಪ್ರಯೋಜನವಿಲ್ಲ. ಸಣ್ಣದಾಗಿರುವಾಗಲೇ ಬಗೆಹರಿಸಿಕೊಂಡರೆ ನಮ್ಮ ಕೈಗಾರಿಕೆ, ವಾತಾವರಣ ಸುಂದರವಾಗಿರುತ್ತದೆ ಎಂದು ಪ್ರತಿಪಾದಿಸಿದರು.
ಎಲ್ಲಿ ಕೈಗಾರಿಕಾ ಶಾಂತಿ ಇರುತ್ತೋ ಅಲ್ಲಿ ಕಾರ್ಮಿಕರು ಮತ್ತು ಕೈಗಾರಿಕೆ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಹೊರ ದೇಶದಿಂದ ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವವರೂ ಸಹ ರ‌್ಯಾಂಕಿಂಗ್ ನೋಡುತ್ತಾರೆ. ಯಾವ ದೇಶ ಎಷ್ಟು ರ‌್ಯಾಂಕಿಂಗ್ ಹೊಂದಿದೆ. ಅಲ್ಲಿ ಮಾನವ ಸಂಪನ್ಮೂಲ, ಕೈಗಾರಿಕಾ ಶಾಂತಿ ಎಲ್ಲವನ್ನೂ ನೋಡಿಕೊಂಡೇ ಸ್ಥಾಪನೆ ಮಾಡುತ್ತಾರೆ. ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಮಾತ್ರ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದರು.