ಬೆಳಗಾವಿಯಲ್ಲಿ ಕಾರ್ಮಿಕ ಇಲಾಖೆ ಸ್ಥಾಪಿಸಿ

22 Jaggu 3A-Web
ಬೆಳಗಾವಿ ಸದಾಶಿವನಗರದ ಬಿಜೆಪಿ ಕಚೇರಿಗೆ ಸೋಮವಾರ ಆಗಮಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೂಗುಚ್ಛ ನೀಡಿ ಬರ ಮಾಡಿಕೊಂಡರು. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಇದ್ದರು.
Published on

ಬೆಳಗಾವಿ: ಸಚಿವರಾಗಿ ಮೊದಲ ಬಾರಿ ನಗರಕ್ಕೆ ಆಗಮಿಸಿದ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸದಾಶಿವ ನಗರದ ಬಿಜೆಪಿ ಕಚೇರಿಯಲ್ಲಿ ಸ್ವಾಗತಿಸಿ ಸತ್ಕರಿಸಲಾಯಿತು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇದ್ದರು.

ಇದೇ ವೇಳೆ ಉತ್ತರ ಶಾಸಕ ಅನಿಲ ಬೆನಕೆ ಮಾತನಾಡಿ, ಇಡೀ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಕಾರ್ಮಿಕರ ಹೆಸರನ್ನು ನೋಂದಣಿ ಮಾಡಿಸಿದೆ. ಅದೇ ರೀತಿ ಕಾರ್ಮಿಕ ಇಲಾಖೆ ಕಚೇರಿಯೂ ಉದ್ಯಮಬಾಗದಲ್ಲಿದೆ. ಹೀಗಾಗಿ ಉತ್ತರ ಕ್ಷೇತ್ರದ ಕಾರ್ಮಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಶೀಘ್ರ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿದರು. ಶಾಸಕ ಅಭಯ ಪಾಟೀಲ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕ ಅಧ್ಯಕ್ಷ ಶಶಿಕಾಂತ ಪಾಟೀಲ ಹಾಗೂ ಬಿಜೆಪಿ ಮುಖಂಡರಿದ್ದರು.

ಜಾಗೃತಿ ರಥಕ್ಕೆ ಚಾಲನೆ: ಬಳಿಕ ಪ್ರವಾಸಿ ಮಂದಿರಕ್ಕೆ ತೆರಳಿ ಕ್ಷೌರಿಕರು, ಮಡಿವಾಳರಿಗೆ ೋಷಿಸಿರುವ 5 ಸಾವಿರ ರೂ. ಪರಿಹಾರ ಪಡೆಯುವ ಬಗ್ಗೆ ಜಾಗೃತಿ ರಥಕ್ಕೆ ಚಾಲನೆ ನೀಡಿದರು. ಅಲ್ಲಿಂದ ಬೆಳಗಾವಿ ಅಶೋಕ ನಗರದ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಪರಿಶೀಲಿಸಿ, ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ತಜ್ಞ ವೈದ್ಯಾಧಿಕಾರಿಗಳ ಕೊರತೆ, ಸೌಲಭ್ಯಗಳ ಕೊರತೆ ಬಗ್ಗೆ ಇಎಸ್‌ಐ ಆಸ್ಪತ್ರೆಯ ಮುಖ್ಯಸ್ಥರು ಸಚಿವರಿಗೆ ಮಾಹಿತಿ ನೀಡಿ, ಹೆಚ್ಚಿನ ಸೌಲಭ್ಯಕ್ಕೆ ಬೇಡಿಕೆ ಸಲ್ಲಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವಿಧಾನಸಭೆಯಲ್ಲಿ ಉತ್ತರ ಕೊಡುವೆ

ಸರ್ಕಾರದ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿರುವ ಆರೋಪಗಳಿಗೆ ವಿಧಾನಸಭೆಯಲ್ಲಿ ಉತ್ತರ ಕೊಡುವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೇಳಿದರು. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಎಷ್ಟು ಜನರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವ ಲಕ್ಷ್ಮೀ ಅವರು ನಮ್ಮನ್ನು ಹೊಗಳಲು ಹೇಗೆ ಸಾಧ್ಯ? ಸ್ವತಂತ್ರ ಬಂದ ಬಳಿಕ ಕಟ್ಟಡ ಕಾರ್ಮಿಕರನ್ನು ಹೊರತು ಪಡಿಸಿ ಅಸಂಘಟಿತ ಕಾರ್ಮಿಕರ ಸರಿಯಾದ ಲೆಕ್ಕ ಮೊದಲಿದ್ದ ಸರ್ಕಾರಗಳ ಬಳಿ ಇಲ್ಲ. ಕೇರಳದಲ್ಲಿ 26 ಬೋರ್ಡ್ ಇವೆ. ನಾವು ಏನು ಹೇಳುತ್ತೇವೆಯೋ ಅದನ್ನೇ ಮಾಡುತ್ತೇವೆ. ಏನು ಮಾಡಿದ್ದೇವೆಯೋ ಅಷ್ಟನ್ನೇ ಹೇಳುತ್ತೇವೆ. ಸರ್ವೇ ಮಾಡಿಲ್ಲ, ಪರಿಹಾರ ಘೋಷಿಸಿದ್ದಾರೆಂಬ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಕ್ಕೆ ವಿಧಾನಸಭೆಯಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net