

ಸಿಂಧನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬ ಕಾರ್ಮಿಕ ಹೆಗಲೊಡ್ಡಲು ಮುಂದಾಗಬೇಕು ಎಂದು ಎಐಸಿಸಿಟಿಯು ರಾಜ್ಯ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಹೇಳಿದರು.
ನಗರದ ರೈತ ಭವನದಲ್ಲಿ ಶುಕ್ರವಾರ ಎಐಸಿಸಿಟಿಯು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. ಕಾರ್ಮಿಕ ವಿರೋಧಿ ನೀತಿ ಅನುಸರಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಮಾಲೀಕತ್ವದ ವಿರುದ್ಧ ಕಾರ್ಮಿಕ ದಂಗೆಗಳನ್ನು ಸಂಘಟಿಸಬೇಕಾಗಿದೆ.
ಕಾರ್ಮಿಕ ವರ್ಗದ ಐಕ್ಯತೆ, ಹಕ್ಕುಗಳನ್ನು ಪಡೆಯಲು ಹೋರಾಡಬೇಕು. ಜು.9ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರವನ್ನು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು. ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಕೇಂದ್ರದಲ್ಲಿ ಆಳುವ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂಡವಾಳ ಶಾಹಿಗಳ ಪರವಾದ ನೀತಿಗಳನ್ನು ಜಾರಿ ಮಾಡುವ ಮೂಲಕ ಜನದ್ರೋಹ ಮಾಡುತ್ತ ಬಿಜೆಪಿಯೊಂದಿಗೆ ಸ್ಪರ್ಧೆಗಿಳಿದಿದೆ ಎಂದು ದೂರಿದರು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಎಐಸಿಸಿಟಿಯು ನೂತನ ಜಿಲ್ಲಾ ಅಧ್ಯಕ್ಷರಾಗಿ ಅಜಿಜ್ ಜಾಗೀದಾರ, ಜಿಲ್ಲಾ ಕಾರ್ಯದರ್ಶಿಯಾಗಿ ಬಸವರಾಜ ಎಕ್ಕಿ ಹಾಗೂ 13 ಜನರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು. ಪ್ರಮುಖರಾದ ಬಸವರಾಜ ಬೆಳಗುರ್ಕಿ, ಆರ್.ಎಚ್. ಕಲಮಂಗಿ ಶ್ರೀನಿವಾಸ ಬುಕ್ಕನ್ನಟ್ಟಿ, ವೀರೇಶ ಲಿಂಗಸುಗೂರು, ಬಸವರಾಜ ದೇವದುರ್ಗ, ಬಸವರಾಜ ಕೊಂಡೆ ಇದ್ದರು.