ಮಕ್ಕಳ ಜ್ಞಾನ ವೃದ್ಧಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿ

atal tinkering
Published on

ಕಲಘಟಗಿ: ನವೀನ ಮತ್ತು ಸಂವಹನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿ ಸಾಧ್ಯ ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಉಮಾದೇವಿ ಬಸಾಪೂರ ಅಭಿಪ್ರಾಯಪಟ್ಟರು.

ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಮ್ಯುನಿಟಿ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳಿಗೆ ವಿಭಿನ್ನ ಪ್ರಯೋಗಗಳೊಂದಿಗೆ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಕುಮಾರ ಕೆ.ಎಫ್. ಮಾತನಾಡಿ, ವಾಸ್ತವಿಕತೆಗೆ ಹತ್ತಿರವಾಗಿರುವ ಮತ್ತು ಮಕ್ಕಳು ಹೊಂದಿರುವ ಕಲ್ಪನೆಗಳನ್ನು ಜಾರಿ ಮಾಡಲು ಇಂತಹ ಲ್ಯಾಬ್‌ಗಳು ಅಗತ್ಯವಾಗಿವೆ. ಅನ್ವೇಷಣೆಗಳಿಗೆ ಪೇಟೆಂಟ್ ಪಡೆದು ದೇಶದ ಸಂಶೋಧನೆಗಳನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಬೇಕು ಎಂದರು.

ಸಂಸ್ಥೆಯ ಚೇರ್ಮನ್ ನಂದೀಶ ಎಚ್.ಪಾಟೀಲ ಮಾತನಾಡಿ, ನಿಗದಿತ ಪಠ್ಯಕ್ರಮಕ್ಕಿಂತ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ಮುಖ್ಯೋಪಾಧ್ಯಾಯ ಎಸ್.ಕೆ. ಪಾಟೀಲ ಕುಲಕರ್ಣಿ ಮಾತನಾಡಿ, ಮಕ್ಕಳ ಕುತೂಹಲ ತಣಿಸಲು ಹಾಗೂ ಅವರಲ್ಲಿ ಆವಿಷ್ಕಾರದ ಗುಣ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶಾಲೆಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ನೀಡಿದೆ. ಆಟ-ಪಾಠದ ಜತೆಗೆ ವೈಜ್ಞಾನಿಕ ಮನೋಭಾವ ಮೂಡಿಸಿ ಸುಭದ್ರ ಭಾರತ ನಿರ್ಮಾಣಕ್ಕಾಗಿ ಲ್ಯಾಬ್ ಸಹಕಾರಿ ಆಗಿದೆ ಎಂದರು.

ಕೆ.ಐ. ಕೊಂಗಿ, ವಿಜ್ಞಾನ ಶಿಕ್ಷಕಿ ರೂಪಾ ಕಾಗಿನೆಲಿ, ಸುಬ್ರಮಣ್ಯ ಸತ್ತಿಗೇರಿ, ಬಿ.ಎಸ್. ದೇವರಮನಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net