ದಿನಪತ್ರಿಕೆ ವಿತರಕರ ನೋಂದಣಿ, ವಿಮೆ ಸೌಲಭ್ಯ ಶಿಬಿರಕ್ಕೆ ಚಾಲನೆ

IMG-20240108-WA0004.jpg
Published on


-ವಿಜಯವಾಣಿ ಸಹಯೋಗದ ಕಾರ್ಯಕ್ರಮ
ಬೆಳಗಾವಿ: ಅರೆಕಾಲಿಕ ವೃತ್ತಿಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ  ಕಾರ್ಮಿಕ ಇಲಾಖೆ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಾರ್ಮಿಕ ಇಲಾಖೆಯಲ್ಲಿ  ನೋಂದಣಿ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತ ನಾಗೇಶ ವಿನಂತಿಸಿದರು.
ನಗರದ ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೆ ವಿತರಕರ ನೋಂದಣಿ ಮತ್ತು ವಿಮೆ ಸೌಲಭ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ, ವೇತನ ಭದ್ರತೆ ಇಲ್ಲ. ಅತಂತ್ರದಲ್ಲಿಯೇ ದುಡಿಯುತ್ತಿದ್ದಾರೆ. ಇವರಿಗೆಲ್ಲಾ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲೀನ ವೃತ್ತಿ ನಿರ್ವಹಿಸುತ್ತಿದ್ದು, ಪ್ರತ್ಯಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ. ಇವರಿಗೆ ಉದ್ಯೋಗ, ವೇತನ ಭದ್ರತೆ ಇಲ್ಲವೇ ಇಲ್ಲ. ಈ ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರವು ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಘೋಷಣೆ ಮಾಡಿದೆ. ನೀವು ಕುಟುಂಬದ ಸಲುವಾಗಿಯಾದರೂ ವಿಮೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಈಗಾಗಲೇ ರಾಜ್ಯಾದ್ಯಂತ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ನೋಂದಣಿ ಪ್ರಕ್ರಿಯೇ ಆರಂಭವಾಗಿದ್ದು, ಇಲ್ಲಿಯವರೆಗೆ  2650ಕ್ಕೂ ಅಧಿಕ ಕಾರ್ಮಿಕರು ನೋಂದಣಿ  ಮಾಡಿಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಅಪಘಾತದಿಂದ ಮರಣ ಹೊಂದಿದಲ್ಲಿ 2 ಲಕ್ಷ ರೂ. ಅಥವಾ ಅಪಘಾತದಿಂದ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರೂ. ವರೆಗೆ ಪರಿಹಾರ ಸಿಗಲಿದೆ. ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ  1ಲಕ್ಷ ರೂ. ಆರ್ಥಿಕ ಸಹಾಯಧನ ಸೌಲಭ್ಯ ಸಿಗಲಿದೆ.ಹಾಗಾಗಿ ಪತ್ರಿಕಾ ವಿತರಕರು ಸಮೀಪದ ಸೇವಾ ಕೇಂದ್ರಗಳಲ್ಲಿ, ಗ್ರಾಪಂ ಇಲ್ಲವೇ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪತ್ರಿಕೆ ವಿತರಕರ ಸಂಘದ ನಿರ್ದೇಶಕ ಶ್ರೀರಾಜು ಬೋಸಲೆ ಮಾತನಾಡಿ,  ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಅವರು ಪತ್ರಿಕಾ ವಿತರಕರ ಮೇಲೆ ಕಾಳಜಿಯಿಂದ ನೋಂದಣಿ ಮತ್ತು ವಿಮೆ ಸೌಲಭ್ಯ ಶಿಬಿರ ಹಮ್ಮಿಕೊಂಡಿರುವುದಕ್ಕೆ ಧನ್ಯವಾದಗಳು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ  ಪತ್ರಿಕಾ ವಿತರಕರು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಅಧಿಕಾರಿಗಳಾದ ತರುನಂ ಬೆಂಗಾಲಿ, ಮಲ್ಲಿಕಾರ್ಜುನ ಜೋಗುರ, ಸಂಘದ ನಿರ್ದೇಶಕ ಸತೀಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net