ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ರೋಗಿಗಳಿಗೆ ಅನುಕೂಲ

Oplus_0
ಯಳಂದೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನೂತನ ಲ್ಯಾಬ್ ಕಟ್ಟಡಕ್ಕೆ ಸೋಮವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಭೂಮಿಪೂಜೆ ನೆರವೇರಿಸಿದರು. ಲಕ್ಷ್ಮೀ ಮಲ್ಲು, ಎಚ್.ವಿ.ಚಂದ್ರು ಇತರರು ಇದ್ದರು.
Published on

ಯಳಂದೂರು: ಪಟ್ಟಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದ್ದು, ಖಾಸಗಿ ಲ್ಯಾಬ್‌ಗಳಿಗೆ ದುಬಾರಿ ಹಣ ನೀಡುವ ಪರಿಸ್ಥಿತಿ ತಪ್ಪಲಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನೂತನ ಲ್ಯಾಬ್‌ನ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ನಿಯಮದಂತೆ ಮೆಡಿಕಲ್ ಕಾಲೇಜು ಇರುವೆಡೆ ಎರಡು ಆಸ್ಪತ್ರೆಗಳು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಎಡಬೆಟ್ಟದಲ್ಲಿ ಆಸ್ಪತ್ರೆ ಕಟ್ಟಡವಿದೆ. ಕೊಳ್ಳೇಗಾಲದಲ್ಲಿ 250 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರಕಿದ್ದು, 5 ಎಕರೆ ಭೂಮಿ ಮೀಸಲಿಟ್ಟಿದೆ. ಇದು ಗುಲ್ಬರ್ಗ ಬಿಟ್ಟರೆ ಚಾಮರಾಜನಗರ ಜಿಲ್ಲೆಯಲ್ಲಿ ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ 2 ನೇ ಆಸ್ಪತ್ರೆಯಾಲಿದೆ. ಯಳಂದೂರು ಪಟ್ಟಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗಿದ್ದು ಕೊಳ್ಳೇಗಾಲಕ್ಕೂ ಮುಖ್ಯಮಂತ್ರಿ ಹಾಗೂ ಆರೋಗ್ಯಮಂತ್ರಿಗಳನ್ನು ಕರೆಯಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಈಗ ನೂತನ ಲ್ಯಾಬ್ ನಿರ್ಮಾಣವಾಗಲಿದ್ದು, ಇದರಲ್ಲಿ ರಕ್ತ, ಕಫ, ಮಲ, ಮೂತ್ರ ಸೇರಿದಂತೆ ಇತರ ಪರೀಕ್ಷೆಗಳು ನಡೆಯಲಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಮಾಡುವ ರಕ್ತ ಪರೀಕ್ಷೆಗಳು, ಬ್ಲಡ್ ಕಲ್ಚರ್, ಡೆಂೆ ಸೇರಿದಂತೆ ಇತರ ಜ್ವರ ಪರೀಕ್ಷೆಗಳ ರಕ್ತ ಪರೀಕ್ಷೆಗಳು ಇರಲಿದೆ. ಇಲ್ಲಿಗೆ ಒಬ್ಬ ಪ್ಯಾಥಾಲಜಿಸ್ಟ್ ಹಾಗೂ ಅಗತ್ಯವಿದ್ದಲ್ಲಿ ಮೈಕ್ರೋಬಯಾಲಜಿಸ್ಟ್‌ಗಳು ಇರಲಿದ್ದು, ತ್ವರಿತವಾಗಿ ರೋಗ ಪತ್ತೆ ಮಾಡಲು ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಹಕಾರವಾಗಲಿದೆ. ಇದರೊಂದಿಗೆ ಬಡರೋಗಿಗಳ ಜೇಬಿಗೂ ಇದು ಹೊರೆಯಾಗುವುದಿಲ್ಲ. 41 ಲಕ್ಷ ರೂ. ವೆಚ್ಚದಲ್ಲಿ ಈ ಲ್ಯಾಬ್ ತಲೆಎತ್ತಲಿದೆ. ಗುಣಮಟ್ಟದ ಕಾಮಗಾರಿಯನ್ನು ಸಂಬಂಧಪಟ್ಟ ಅಭಿಯಂತರರು ಹಾಗೂ ಗುತ್ತಿಗೆದಾರರು ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಕೇವಲ ವಿರೋಧ ಪಕ್ಷಗಳ ಸುಳ್ಳು ಆಪಾದನೆಯಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೇ 550 ಕೋಟಿ ರೂ. ಅನುದಾನದಲ್ಲಿ ಕೆಲಸಗಳು ನಡೆಯುತ್ತಿದೆ. ಈಗ 50 ಕೋಟಿ ರೂ. ವಿಶೇಷ ಅನುದಾನವನ್ನು ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು ಇದರಲ್ಲಿ 37.5 ಕೋಟಿ ರೂ. ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಉಳಿದ 12.5 ಕೋಟಿ ರೂ.ಗಳನ್ನು ಶಾಸಕರ ವಿವೇಚನೆಗೆ ಬಿಡಲಾಗಿದ್ದು, ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಪಟ್ಟಣದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಪಟ್ಟು ಬಿಡದೆ ಶಾಸಕರು ಅನುದಾನ ತಂದು ಕಾಮಗಾರಿ ಭರದಿಂದ ಸಾಗಿದೆ. ಲ್ಯಾಬ್‌ಗೂ ಪ್ರತ್ಯೇಕ ಹಣ ಬಂದಿರುವುದು ಇವರ ದೂರದೃಷ್ಟಿಯ ಫಲವಾಗಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರಂ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ನಾಮನಿರ್ದೇಶಿತ ಸದಸ್ಯ ಲಿಂಗರಾಜುಮೂರ್ತಿ, ಮುನವ್ವರ್‌ಬೇಗ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೈ.ಜಿ.ಶಿಲ್ಪಾ, ರೂಪೇಶ್, ರೇವಣ್ಣ, ಜೆಇ ಕಲ್ಯಾಣಸ್ವಾಮಿ, ಗುತ್ತಿಗೆದಾರ ವಿಕಾಸ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ನಂಜುಂಡಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net