ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಗತ್ಯ

SAN_5199
Published on

ಮೈಸೂರು: ವಿಶ್ವ ರೋಗ ನಿರೋಧಕ ದಿನದ ಅಂಗವಾಗಿ ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಶುಕ್ರವಾರ ಜಾಗೃತಿ ನಡಿಗೆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.


ದಿ ಬಿಗ್ ಕ್ಯಾಚ್ ಆಫ್ ಎಂಬ ಘೋಷವಾಕ್ಯದ ಅಡಿಯಲ್ಲಿ ರೋಗ ನಿರೋಧಕ ವ್ಯಾಕ್ಸಿನೇಷನ್ ಅಗತ್ಯತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಸಲುವಾಗಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ನಡಿಗೆಗೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಚಾಲನೆ ನೀಡಿದರು.

ವಯಸ್ಸಾದಂತೆ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಮನುಷ್ಯ ಅನೇಕ ರೋಗಗಳಿಗೆ ತುತ್ತಾಗಬಹುದು. ಇದನ್ನು ಮನಗಂಡು ವಯಸ್ಕರು ದೇಹದ ಪುನಶ್ಚೇತನದ ಅಗತ್ಯ ಪೂರೈಸಲು ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಬಹಳ ಉಪಯೋಗಕಾರಿ ಎಂದು ಅವರು ಹೇಳಿದರು.

ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಬಸವನಗೌಡಪ್ಪ ಮಾತನಾಡಿ, ಜೆಎಸ್‌ಎಸ್ ಆಸ್ಪತ್ರೆ ಹಲವು ವರ್ಷಗಳಿಂದ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದೆ. ಮೈಸೂರಿನಲ್ಲಿ ಪ್ರಥಮವಾಗಿ ರೋಗ ನಿರೋಧಕ ಲಸಿಕಾ ಕೇಂದ್ರ ಸೇವೆಗೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಜಾಗೃತಿ ನಡಿಗೆಯಲ್ಲಿ ಆಸ್ಪತ್ರೆ ಸಿಬ್ಬಂದಿ, ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್, ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಸ್ಪತ್ರೆಯಿಂದ ಆರಂಭವಾದ ನಡಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತ, ಅಗ್ರಹಾರ ವೃತ್ತದ ಆಸ್ಪತ್ರೆ ಆವರಣದಲ್ಲಿ ಅಂತ್ಯವಾಯಿತು.

ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಡಾ.ಬಿ.ಮಂಜುನಾಥ್, ಆಸ್ಪತ್ರೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವೈ.ಎಸ್.ರವಿಕುಮಾರ್, ಸಹ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ, ಆಡಳಿತಾಧಿಕಾರಿ ಲೋಕೇಶ್, ಸೇಫ್ ವ್ಹೀಲ್ಸ್ ಮುಖ್ಯಸ್ಥ ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net