ಮಹಿಳೆ ಚಿನ್ನದ ಸರ ಕಸಿದು ಪರಾರಿ

CRIME LOGOS
Published on

ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಗೃಹಿಣಿಯಿಂದ ಸುಮಾರು 35 ಗ್ರಾಂ ತೂಕದ ಚಿನ್ನದ ಸರವನ್ನು ಖದೀಮನೊಬ್ಬ ದೋಚಿ ಪರಾರಿಯಾಗಿದ್ದಾನೆ.
ವಿಜಯನಗರ ನಾಲ್ಕನೇ ಹಂತದ ಪಂಚಾಚಾರ್ಯ ಬಡಾವಣೆಯ ಸಿ.ಟಿ. ಶ್ರೀಧರ್ ಅವರ ಪತ್ನಿ ಎಚ್.ಎನ್.ಲತಾ ಸರ ಕಳೆದುಕೊಂಡವರು. ಲತಾ ಅವರು ಭಾನುವಾರ ಸಂಜೆ ಬಡಾವಣೆಯ ಫಾರ್ಮ್ ಬಳಿ ವಾಯುವಿಹಾರಕ್ಕೆ ತೆರಳಿದ್ದಾಗ ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಕಳ್ಳ, ಕೆಲ ಸಮಯ ಮೊಬೈಲ್‌ನಲ್ಲಿ ಮಾತನಾಡುವಂತೆ ನಟಿಸಿದ್ದಾನೆ. ಲತಾ ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಹಿಂಬದಿಯಿಂದ ಬಂದು ಏಕಾಏಕಿ ಸರಕ್ಕೆ ಕೈ ಹಾಕಿದ್ದಾನೆ.
ಈ ವೇಳೆ ಲತಾ ತಾಳಿ ಸಹಿತ ಸರವನ್ನು ಹಿಡಿದುಕೊಂಡಿದ್ದರೂ ಬಲವಾಗಿ ಎಳೆದಿದ್ದರಿಂದ ಸರ ತುಂಡಾಗಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಆದರೂ ಲತಾ ಅವರ ಕೈಯಲ್ಲಿ ಹಿಡಿದಿದ್ದ ತಾಳಿ ಸಹಿತ ಸುಮಾರು 10 ಗ್ರಾಂನಷ್ಟು ಚಿನ್ನವನ್ನು ಕೊಡುವಂತೆ ಖದೀಮ ಬೆದರಿಕೆ ಹಾಕಿದ್ದಾನೆ. ಭಯಗೊಂಡ ಲತಾ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಿದ್ದ ರಭಸಕ್ಕೆ ಹಣೆಗೆ ಗಾಯವಾಗಿದೆ. ವಿಷಯ ತಿಳಿದ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net