ಮೈಸೂರಿನ ಹಳೇ ಕೆಸರೆಗೆ ಬರುತ್ತಿದೆ ಕೇರಳ ಕಸ

27
Published on

ಆರ್.ಕೃಷ್ಣ ಮೈಸೂರು
ನೆರೆ ರಾಜ್ಯ ಕೇರಳದಿಂದ ಮೈಸೂರಿಗೆ ಮತ್ತೆ ಕಸ ಸಾಗಣೆ ನಡೆಯುತ್ತಿದ್ದು, ಸ್ವಚ್ಛನಗರಿ ಈಗ ಕಸದ ಕೊಂಪೆಯಾಗುತ್ತಿದೆ. ನಿತ್ಯ 4 ರಿಂದ 5 ಲಾರಿಯಲ್ಲಿ ಆಸ್ಪತ್ರೆ, ಹೋಟೆಲ್ ಮನೆಗಳ ತ್ಯಾಜ್ಯದ ವಸ್ತುಗಳನ್ನು ತಂದು ಹಳೇ ಕೆಸರೆಯಲ್ಲಿ ಸುರಿಯಲಾಗುತ್ತಿದೆ.
ನಗರಪಾಲಿಕೆ ಕಸದ ಯಾರ್ಡ್ ಪಕ್ಕದಲ್ಲಿಯೇ ಖಾಸಗಿ ಜಮೀನಿನಲ್ಲಿ ಕಸ ಹಾಕುತ್ತಿದ್ದರೂ ಇನ್ನೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದೆ ಇರುವುದರಿಂದ ಇದು ನಿರಂತರವಾಗಿ ಮುಂದುವರಿಯುತ್ತಿದೆ.
ಹಳೇ ಕೆಸರಿಯಲ್ಲಿ ನಗರಪಾಲಿಕೆಯಿಂದ ಕಸದ ಡಂಪಿಂಗ್ ಯಾರ್ಡ್ ಮಾಡಿಕೊಂಡಿದ್ದು, ಇದರ ಕಾಂಪೌಂಡ್‌ಗೆ ಹೊಂದಿಕೊಂಡಂತೆಯೇ 2.5 ಎಕರೆ ಜಾಗದಲ್ಲಿ ಕಸ ಹಾಕಲಾಗುತ್ತಿದೆ. ಗುಜರಿಗೆ ಬೇಕಾದ ವಸ್ತುಗಳನ್ನು ಆಯ್ದುಕೊಂಡು ಉಳಿದ ಕಸವನ್ನು ಖಾಸಗಿ ಜಮೀನಿನಲ್ಲಿಯೇ ಹಾಕುತ್ತಿರುವುರಿಂದ ಮತ್ತೊಂದು ಕಸದ ಗುಡ್ಡವೇ ನಿರ್ಮಾಣವಾಗುತ್ತಿದೆ. ಎಚ್.ಡಿ. ಕೋಟೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಾವಲಿ ಚೆಕ್‌ಪೋಸ್ಟ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಚೆಕ್‌ಪೋಸ್ಟ್ ಮೂಲಕ ಮೈಸೂರಿಗೆ ಬರುತ್ತಿವೆ.
ಕೆಲವು ವರ್ಷಗಳ ಹಿಂದೆಯೂ ಕೇರಳದಿಂದ ಕಸ ತಂದು ಗಡಿ ಭಾಗದಲ್ಲಿ ಸುರಿಯುತ್ತಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ನಗರದಲ್ಲಿ ಕೆಲವು ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದ ಗುತ್ತಿಗೆದಾರರು ರಾತ್ರೋರಾತ್ರಿ ಕಸವನ್ನು ನಗರಕ್ಕೆ ತಂದು ಪಾಲಿಕೆ ಕಸದಲ್ಲಿ ಅದನ್ನು ಸುರಿಯುತ್ತಿದ್ದರು. ಈ ಬಗ್ಗೆ ಬಂದ ದೂರಿನ ಮೇರೆಗೆ ಹಿಂದೆ ಮೇಯರ್ ಅಗಿದ್ದ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಲಾರಿಗಳನ್ನು ತಡೆದು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅಲ್ಲದೇ, ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಶಂಕರ್ ಅವರು ನೆರೆ ರಾಜ್ಯಗಳಿಂದ ತ್ಯಾಜ್ಯ ತರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಕ್ರಮಕೈಗೊಂಡಿದ್ದರು.
ವ್ಯವಸ್ಥಿತ ಮಾಫಿಯಾ:
ಕೇರಳ ರಾಜ್ಯದ ಕಸವನ್ನು ಮೈಸೂರು ನಗರಕ್ಕೆ ತಂದು ಸುರಿಯುವ ವ್ಯವಸ್ಥಿತ ಮಾಫಿಯಾವೊಂದು ಕಾರ್ಯಪ್ರವೃತವಾಗಿದೆ. ಹಿಂದೆ ಕೇರಳ ರಾಜ್ಯದಿಂದ ಕಸವನ್ನು ತಂದು ಅರಣ್ಯದಂಚಿನಲ್ಲಿ ಸುರಿದು ಹೋಗುತ್ತಿದ್ದರು. ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಈ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಕೇರಳದ ತ್ಯಾಜ್ಯವು ಚಾಮರಾಜನಗರ ಜಿಲ್ಲೆಯನ್ನು ದಾಟಿ ನೇರವಾಗಿ ಮೈಸೂರು ನಗರವನ್ನು ತಲುಪುತ್ತಿದೆ. ಹಣದಾಸೆಗೆ ಬೀಳುತ್ತಿರುವ ಕೆಲವು ಲಾರಿ ಚಾಲಕರು ಕಸವನ್ನು ನಗರದೊಳಗೆ ತಂದು ಸುರಿಯುತ್ತಿರುವುದು ಮತ್ತೊಮ್ಮೆ ಚಾಮರಾಜನಗರ, ಮೈಸೂರು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ದಂಧೆ ನಿರಂತರ :
ಮೈಸೂರು-ಕೇರಳ ನಡುವೆ ದಿನಸಿ, ತರಕಾರಿ, ದಿನಬಳಕೆ ವಸ್ತುಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ಆದರೆ ಕೆಲವು ಲಾರಿಗಳಲ್ಲಿ ಮೈಸೂರಿನಿಂದ ಕೇರಳ ರಾಜ್ಯಕ್ಕೆ ಹೋಗುವಾಗ ನಾನಾ ವಸ್ತುಗಳನ್ನು ಸಾಗಣೆ ಮಾಡಿ, ಕೇರಳ ರಾಜ್ಯದಿಂದ ವಾಪಸಾಗುವಾಗ ಹಣ ಪಡೆದುಕೊಂಡು ಆ ರಾಜ್ಯದ ಕಸವನ್ನು ಅದೇ ಲಾರಿಯಲ್ಲಿ ತುಂಬಿಕೊಂಡು ಬಂದು ನಗರದಲ್ಲಿ ಸುರಿಯುತ್ತಿದ್ದಾರೆ.
ಪರಿಸರಕ್ಕೆ ಹಾನಿಕಾರಕ
ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಇ- ತ್ಯಾಜ್ಯವನ್ನು ತರಲಾಗುತ್ತಿದೆ. ಇವು ಪರಿಸರಕ್ಕೂ ಹಾನಿಕಾರವಾಗಿವೆ. ಅಲ್ಲದೇ, ನಗರದ ಕೆಲವರು ಈ ಘನತ್ಯಾಜ್ಯವನ್ನು ಪ್ಲಾಸ್ಟಿಕ್ ಮೌಲ್ಡಿಂಗ್ ಸೇರಿದಂತೆ ಇನ್ನಿತರ ಉದ್ಯಮಕ್ಕೆ ಬಳಕೆ ಮಾಡಿಕೊಂಡು ಬೇರೆ ವಸ್ತುಗಳನ್ನು ತಯಾರಿಸುವ ಘಟಕಗಳಿಗೆ ಕಡಿಮೆ ಬೆಲೆಯಲ್ಲಿ ಕಸವನ್ನು ಮಾರಾಟ ಮಾಡುತ್ತಾರೆ. ಅವರು ಆ ಕಸದಲ್ಲಿರುವ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಉಳಿದ ಕಸಕ್ಕೆ ಬೆಂಕಿ ಹಾಕುತ್ತಾರೆ. ಇದರಿಂದ ಲಾರಿಗಳ ಚಾಲಕರಿಗೆ ಕೇರಳದವರಿಂದ ಹಾಗೂ ನಗರದ ಪ್ಲಾಸ್ಟಿಕ್ ತಯಾರಿಕಾ ಘಟಕದ ಕಡೆಯವರಿಂದಲೂ ಹಣ ಸಿಗುತ್ತದೆ. ಒಂದು ವೇಳೆ ಯಾರೂ ಖರೀದಿಗೆ ಮುಂದೆ ಬಾರದಿದ್ದಲ್ಲಿ ಖಾಲಿ ಜಾಗದಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲ ಅಡಗಿದೆ.
ನಿತ್ಯ 4 ಟನ್ ಸಂಗ್ರಹ:
ಸ್ವಚ್ಛನಗರಿ ಪಟ್ಟ ಪಡೆದಿರುವ ಮೈಸೂರು ನಗರದಲ್ಲಿ ನಿತ್ಯವೂ 4 ಟನ್ ಕಸ ಸಂಗ್ರಹವಾಗುತ್ತಿದೆ. ಈ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗದೆ ಈಗಾಗಲೆ 7 ಲಕ್ಷ ಟನ್ ತ್ಯಾಜ್ಯ ಬಾಕಿ ಉಳಿದಿದೆ. ಇದನ್ನು ತೆರವುಗೊಳಿಸುವುದು ಪಾಲಿಕೆಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಸಮಯದಲ್ಲಿಯೇ ಈಗ ಮೈಸೂರಿಗೆ ಕೇರಳ ರಾಜ್ಯದ ತ್ಯಾಜ್ಯವನ್ನು ತಂದು ಸುರಿಯುವ ಮಾಫಿಯಾ ಜಾಗೃತವಾಗಿರುವುದು ಪಾಲಿಕೆಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net