

ಮೈಸೂರು : ವ್ಯಕ್ತಿ ಆಧಾರಿತ ಕೃತಿಯನ್ನು ಬರೆಯುವಾಗ ಆರಾಧನಾ ಮನೋಭಾವ ಬಂದುಬಿಟ್ಟರೆ ಕೃತಿಯು ಸೋತು ಹೋಗಲಿದೆ ಎಂದು ಲೇಖಕ ನಂದೀಶ್ ಹಂಚೆ ಹೇಳಿದರು.
ನಗರದಲ್ಲಿ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ನಟರಾಜ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಎಲ್.ಶಿವಲಿಂಗಪ್ಪ ಅವರ ‘ಶಿಲ್ಪಿಯೇ ರಾಜಗುರುವಾಗಿ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿಲ್ಪ ಸಿದ್ಧಾಂತಿ ಸಿದ್ದಲಿಂಗಸ್ವಾಮೀಜಿ ಅವರ ಅಧ್ಯಯನವನ್ನು ಶಿವಲಿಂಗಪ್ಪ ಅವರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ವ್ಯಕ್ತಿ ಚಿತ್ರವಷ್ಟೇ ಅಲ್ಲ, ಆ ಕಾಲದ ಸಾಮಾಜಿಕ, ಧಾರ್ಮಿಕ ಹಾಗೂ ಕಲಾ ಜಗತ್ತನ್ನು ಪರಿಚಯಿಸಿಕೊಡುತ್ತದೆ. ಮೈಸೂರಿನ ಚಿತ್ರಕಲೆ, ಸಂಗೀತ, ಸಾಹಿತ್ಯ ಹಾಗೂ ವಿಚಾರಗಳನ್ನು ಕೃತಿಯ ಮೂಲಕ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಶಿಲ್ಪಿಯು ಎಂದಿಗೂ ಆಸ್ತಿಕ ಮನೋಭಾವ ಉಳ್ಳವನು. ಶಿಲ್ಪ ರೂಪುಗೊಂಡಾಗ ನೋಡುವವರರಲ್ಲಿ ದೈವಿಕತೆ ಮೂಡಬೇಕೆಂದರೆ ಶಿಲ್ಪಿಯ ಕಲ್ಲಿಗೆ ಅಧ್ಯಾತ್ಮ ಸ್ಪರ್ಶವನ್ನು ಉಳಿಯ ಮೂಲಕ ನೀಡಿರುತ್ತಾನೆ. ಸಿದ್ದಲಿಂಗಸ್ವಾಮೀಜಿ ಅವರ ಆಸ್ತಿಕತೆಯು ವೇದ, ಆಗಮ ಎಲ್ಲವನ್ನು ಓದಿ ದೊಡ್ಡ ಆಸ್ತಿಕರಾಗಿದ್ದರು ಎಂದರು.
ಜಯಚಾಮರಾಜೇಂದ್ರ ಒಡೆಯರ್ ಅವರು ಋಗ್ವೇದಾ ಸಂಹಿತೆಯನ್ನು ಬರೆಯಲು ಸಿದ್ದಲಿಂಗಸ್ವಾಮಿ ಸ್ಫೂರ್ತಿಯಾಗಿದ್ದರು. ಅದು ಅವರ ಆಸ್ತಿಕತೆಯನ್ನು ತೋರುತ್ತದೆ ಎಂದರು.
ಸಮಾಜವು ವೃತ್ತಿಗಳನ್ನು ಆಧರಿಸಿ ಜಾತಿಗಳಾಗಿ ಒಡೆದು ಹೋಗಿದೆ. ವೃತ್ತಿಗಳ ಬಗ್ಗೆ ಪಾರಂಪರಿಕವಾಗಿ ಬಂದ ಕೌಶಲದ ಶ್ರೇಷ್ಠತೆಯನ್ನು ನಿರಾಕರಿಸಲಾಗದು. ಭಾರತದಲ್ಲಿ ಮೂರ್ತಿಗಳ ಸ್ವರೂಪ ಬಂದದ್ದೇ ಬೌದ್ಧರು ಬಂದ ಮೇಲೆ. ಆಗಮನಗಳು ಬಂದದ್ದೇ ಅವರಿಂದ ಎಂದು ಹೇಳಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.