ಬಗರ್‌ಹುಕುಂ ಅರ್ಜಿ ವಿಲೇವಾರಿಗೆ 2.5 ಲಕ್ಷ ರೂ ಲಂಚ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪ

LRS
Published on

ನಾಗಮಂಗಲ: ತಾಲೂಕಿನಲ್ಲಿ ಬಗರ್‌ಹುಕುಂ ಅರ್ಜಿ ವಿಲೇವಾರಿ ಮಾಡುವುದಾಗಿ ಶಾಸಕರ ಬೆಂಬಲಿಗರು ಹಾಗೂ ಅಧಿಕಾರಿಗಳು ರೈತರಿಂದ ಲಕ್ಷಾಂತರ ರೂ.ಗಳಿಗೆ ಬೇಡಿಕೆ ಇಡುತ್ತಿದ್ದಾರೆ. ತಾಲೂಕನ್ನು ಭ್ರಷ್ಟಾಚಾರದ ಕೂಪ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದರು.
ಬಗರ್‌ಹುಕುಂ ಸಮಿತಿಯ ಹಿಂದಿನ ಎರಡು ಸಭೆಗಳಲ್ಲಿ ಅನುಮೋದಿಸಿರುವ ಅರ್ಜಿಗಳನ್ನು ಸಮಿತಿ ತಿರಸ್ಕರಿಸಿದ್ದು, ಶಾಸಕ ಸುರೇಶ್‌ಗೌಡ ತಮ್ಮ ಹಿಂಬಾಲಕರಿಗೆ ಮಂಜೂರು ಮಾಡಿಕೊಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಅರ್ಹ ರೈತರಿಗೆ ಅನ್ಯಾಯವಾಗಲು ನಾನು ಬಿಡಲ್ಲ. ರೈತರ ಪರವಾಗಿ ಕಾನೂನು ಹೋರಾಟ ಮಾಡುತ್ತೇನೆ. ಬಗರ್‌ಹುಕುಂ ಅರ್ಜಿ ವಿಲೇವಾರಿ ಮಾಡಲು 2-3 ಲಕ್ಷ ರೂ. ಕೇಳಿರುವ ಆಡಿಯೋ ನನ್ನ ಬಳಿಯಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ. ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದಕ್ಕಾಗಿ ಸಿಬ್ಬಂದಿ ನಿಯೋಜಿಸಿಕೊಂಡಿದ್ದಾರೆ. ಅಧಿಕಾರಿಯೊಬ್ಬರು 2.5 ಲಕ್ಷ ರೂ. ಲಂಚ ಪಡೆದಿದ್ದಾರೆ. ಮೇಲಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net