ಕೆ.ಆರ್.ಆಸ್ಪತ್ರೆಗೆ ಎಲ್.ನಾರಾಯಣಸ್ವಾಮಿ ದಿಢೀರ್ ಭೇಟಿ

22
Published on

ಮೈಸೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಅವರು ಮಂಗಳವಾರ ನಗರದ ಕೆ.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವಾರ್ಡ್‌ಗಳು, ರೇಡಿಯೋ ಡಯಾಗ್ನೋಸಿಸ್ ವಿಭಾಗ, ಎಕ್ಸ್ ರೇ ವಿಭಾಗ, ಆಪರೇಷನ್ ಥಿಯೇಟರ್‌ಗಳು ಸೇರಿದಂತೆ ಇತರ ಸ್ಥಳಗಳಿಗೆ ಭೇಟಿ ನೀಡಿದರು. ಬಳಿಕ ಔಷಧಗಳ ದಾಸ್ತಾನು ದಾಖಲಾತಿ ಪರಿಶೀಲಿಸಿದರು. ರೋಗಿಗಳು, ರೋಗಿಗಳ ಸಂಬಂಧಿಕರ ಕುಂದುಕೊರತೆಗಳನ್ನು ಆಲಿಸಿದರು.
ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಬರುವವವರು ಬಡವರು, ಅವರಿಗೆ ಉತ್ತಮವಾದ ಆರೋಗ್ಯ ಸೇವೆ ದೊರೆಯಬೇಕು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ಸಂಬಂಧ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಗುರುತರವಾದ ಸಮಸ್ಯೆ ಕಂಡುಬಂದಿಲ್ಲ. ಆದರೆ ಮರಣ ಪ್ರಮಾಣಪತ್ರ ವಿತರಣೆ ತಡವಾಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಿ ಬೇಗ ಸಿಗುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ.ಟಿ .ಶ್ಯಾಮ್ ಭಟ್, ಡಾ.ಎಸ್.ಕೆ.ವೆಂಕಗೊಡಿ , ಆಸ್ಪತ್ರೆಯ ಆರ್‌ಎಂಒ ಡಾ.ನಯಾಜ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶೋಭಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net