ಕೈಲ್ ಪೊಳ್ದ್ ಕ್ರೀಡಾಕೂಟ ಪಾರಂಪರಿಕತೆಯ ಪ್ರತಿಬಿಂಬ

kridakuta
Published on

ಮಡಿಕೇರಿ: ಕೊಡಗಿನಲ್ಲಿ ನಡೆಯವ ಕೈಲ್ ಪೊಳ್ದ್ ಕ್ರೀಡಾಕೂಟಗಳು ನಮ್ಮ ಪಾರಂಪರಿಕ ವೈಭವದ ಪ್ರತಿಬಿಂಬವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದರು.

ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಜಬ್ಬಂಡ ವಾಡೆಯಲ್ಲಿ ಎ.ಕೆ.ಸಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಾಂಪ್ರದಾಯಿಕ ಕ್ರೀಡಾ ಕೂಟದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಹಿರಿಯರು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಕೈಲ್ ಪೊಳ್ದ್ ಕ್ರೀಡಾಕೂಟಗಳನ್ನು ಪ್ರತಿ ಗ್ರಾಮಗಳಲ್ಲಿ ನಡೆಸುವ ಮೂಲಕ ಭವ್ಯ ಪರಂಪರೆಯನ್ನು ಬಳುವಳಿಯಾಗಿ ನೀಡಿದ್ದಾರೆ. ಅದನ್ನು ನಾವು ಪಾಲಿಸಲು ಬದ್ಧರಾಗಿರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮದ ಹಿರಿಯರು ಕೋಳುಮಾಡಂಡ ರಘು ಪೂವಪ್ಪ ಮಾತನಾಡಿ, ತಾವು ಬಾಲಕರಾಗಿದ್ದಾಗ ಮಂದ್‌ನಲ್ಲಿ ಕೈಲ್ ಪೋಳ್ದ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಈಗಲೂ ಕೂಡ ಯುವ ಸಮೂಹ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಆಚರಣೆಗಳನ್ನು ಆಚರಿಸಿ ಇತರರ ಆಚರಣೆಯನ್ನು ಗೌರವಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೊಡವ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ತೆನ್ನಿರ ರಮೇಶ್ ಪೊನ್ನಪ್ಪ, ಕ್ರೀಡಾ ಕೂಟದ ಆಯೋಜನೆಗೆ ಗ್ರಾಮದ ಜನತೆ ಸಂಪೂರ್ಣವಾಗಿ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಉತ್ತೇಜನ ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಒಂಟಿ ಗುಂಡು ಹಾರಿಸುವ ಮೂಲಕ ಮಂದ್ ಮರಿಯುವ ಆಚರಣೆ ಮಾಡಲಾಯಿತು. ನಂತರ ವಿವಿಧ ಕ್ರೀಡಾ ಕೂಟಗಳು ಜರುಗಿದವು. ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತೆಂಗಿನ ಕಾಯಿಗೆ ಗುಂಡು ಹಾರಿಸುವುದು, ಮೆರಥಾನ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ಕಾಳು ಹೆಕ್ಕುವುದು,

೧೦೦ ಮೀ ಓಟ, ವಾಲಗತ್ತಾಟ್ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಸ್ಪರ್ಧೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಪ್ರಮುಖರಾದ ಮುಂಜಾಂದಿರ ಸತ್ಯ ಬೋಪಯ್ಯ, ಕೋಳುಮಾಡಂಡ ಉಷಾ ಉತ್ತಪ್ಪ, ಜಬ್ಬಂಡ ರಾಜೀವ್ ಬೋಪಣ್ಣ, ಕೋಳುಮಾಡಂಡ ಕಿರಣ್, ಚೆರುಮಾಡಂಡ ಸತೀಶ್ ಸೋಮಣ್ಣ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net