

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೆಟಸ್ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.
ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸೋಮವಾರ ನಡೆದ ೩೦ನೇ ವರ್ಷದ ಸಾರ್ವತ್ರಿಕ ಕೈಲ್ ಪೊವ್ದ್ ಹಬ್ಬ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವರು ಕೇವಲ ೧ ಲಕ್ಷದ ಒಳಗೆ ಇರುವ ಅತ್ಯಂತ ನಗಣ್ಯ ಜನಸಂಖ್ಯೆಯ ಎಥಿನಿಕ್ ಸಮುದಾಯವಾಗಿದೆ. ಭಾರತದ ಈಶಾನ್ಯ ಪ್ರಾಂತ್ಯ ಹಾಗೂ ಗೋದಾವರಿ ಹಿಲ್‌ಟ್ರ್ಯಾಕ್ಟ್ ಮತ್ತು ವಿಶಾಕಪಟ್ಟಣಂ ಹಿಲ್‌ಟ್ರ್ಯಾಕ್ಟ್ ಏಜೆನ್ಸಿಯ ಮಾದರಿಯಲ್ಲಿ ಕೊಡವರಿಗೆ ಶಾಸನಾತ್ಮಕವಾದ ಭದ್ರತೆಯನ್ನು ನೀಡಬೇಕು. ೪೦-೫೦ಲಕ್ಷ ಜನಸಂಖ್ಯೆ ಇರುವ ಬಲಾಡ್ಯರನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಿರುವಾಗ ಸಂವಿಧಾನಿಕ ಸಬಲೀಕರಣಕ್ಕಾಗಿ ಬುಡಕಟ್ಟು ಲಕ್ಷಣವನ್ನು ಹೊಂದಿರುವ ಆದಿಮಸಂಜಾತ ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು ಪ್ರಾಯಾಸದ ಕೆಲಸವಲ್ಲ ಎಂದರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕಿನ ಹೋರಾಟಕ್ಕೆ ನನ್ನನ್ನು ಕರೆದಿದ್ದಾರೆ. ಕರೆದಾಗಲೆಲ್ಲ ನಾನು ಬರುತ್ತಲೇ ಇದ್ದೇನೆ. ಮುಂದೆಯೂ ಬರುತ್ತೇನೆ. ಜನಮಾನಸದಲ್ಲಿ ಕೊಡವ ಹೋರಾಟದ ಆಧಮ್ಯ ಧ್ವನಿ ನಿರಂತರವಾಗಿ ಹಾಗೂ ಚಿರಂತನವಾಗಿ ಮುಂದುವರೆಯುವಂತೆ ಸಿಎನ್‌ಸಿ ತನ್ನ ಹೋರಾಟವನ್ನು ಮುಂದುವರೆಸಿರುವುದು ಶ್ಲಾಘನೀಯ. ಈ ನೈಜ ಹೋರಾಟಕ್ಕೆ ಎಂದಾದರು ಒಂದು ದಿನ ಶುಭಗಳಿಗೆ ಬರಲಿದೆ ಎಂದು ಹೆಚ್.ವಿಶ್ವನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಸಹಾಯಕ ಕೊಡವರ ಶಕ್ತಿಯಂತಿರುವ ಸಿಎನ್‌ಸಿಯ ಬಹುಕಾಲದ ಬೇಡಿಕೆಯನ್ನು ಈಡೇರಿಸುವುದು ಸಾಂವಿಧಾನಿಕ ಬಾಧ್ಯತೆಯಾಗಿದ್ದು, ಇದನ್ನು ಅತ್ಯಂತ ಆದ್ಯತೆ ಮತ್ತು ಮಾನವೀಯ ಧೋರಣೆಯೊಂದಿಗೆ ಪರಿಹರಿಸಬೇಕು. ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಮರೆಯುತ್ತಿದ್ದಾರೆ ಎಂದರು.
ಸಾರ್ವತ್ರಿಕ ಕೈಲ್ ಪೊವ್ದ್ ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಆದಿಮಸಂಜಾತ ಆ್ಯನಿಮಿಸ್ಟಿಕ್ ನಂಬಿಕೆಯ ಏಕಾ ಜನಾಂಗವಾದ ಕೊಡವರಲ್ಲಿ ವಂಶವಾಹಿಯಾಗಿ ಬೇರೂರಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಅನುವಂಶಿಕ ಶಾಶ್ವತ ಹಕ್ಕಾಗಿದೆ. ಬಂದೂಕಿನೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಅರೆಯಡ ಸವಿತಾ, ಪಚ್ಚಾರಂಡ ಶಾಂತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಮತ್ತಿತರರು ಪಾಲ್ಗೊಂಡು ಸಿಎನ್‌ಸಿ ಯ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ತೋಕ್ ಪೂವ್‌ನಿಂದ ಪೂಜೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೈಲ್ ಪೊವ್ದ್ ಪ್ರಯುಕ್ತ ತೋಕ್ ಪೂವ್‌ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು. ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ ಕೈಲ್ ಪೊವ್ದ್ ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.